ಟೇಪ್ ನಿರ್ಮಾಣ ಸ್ನೇಹಂ ಕಾರ್ಖಾನೆಯಲ್ಲಿ ಭಾರಿ ಬೆಂಕಿ ಅವಘಡ: ಹತ್ತಾರು ಜೀವಹಾನಿ ಆತಂಕ!
ಬೆಳಗಾವಿ: ಶಾರ್ಟ್ ಸರ್ಕ್ಯೂಟ್ (Short Circuit) ಆದ ಪರಿಣಾಮ ಟೇಪ್ ನಿರ್ಮಾಣ ಸ್ನೇಹಂ ಕಾರ್ಖಾನೆಗೆ ಬೆಂಕಿ (Factory Fire Tragedy) ಹೊತ್ತಿಕೊಂಡಿದ್ದು, ಇಡೀ ಕಾರ್ಖಾನೆ ಬೆಂಕಿಗಾಹುತಿಯಾಗಿರುವ ಘಟನೆ ತಾಲೂಕಿನ ನಾವಗೆ ಗ್ರಾಮದಲ್ಲಿ ಸಂಭವಿಸಿದೆ. ಘಟನೆಯಲ್ಲಿ ಆಗಿರುವ ಜೀವಹಾನಿ, ಗಾಯದ ಪ್ರಮಾಣ ಇನ್ನು ಗೊತ್ತಾಗಬೇಕಿದೆ.
ಸ್ನೇಹಂ ಟೇಪ್ ಮ್ಯಾನ್ಯುಫ್ಯಾಕ್ಚರ್ ಕಾರ್ಖಾನೆಯ ಲಿಫ್ಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಇಡೀ ಕಾರ್ಖಾನೆಗೆ ವ್ಯಾಪಿಸಿದೆ ಎನ್ನಲಾಗಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟರು. ಕಾರ್ಖಾ ಒಳಗೆ ಹಲವು ಜನ ಕಾರ್ಮಿಕರು ಸಿಲುಕಿರುವ ಶಂಕೆ ಇದೆ.
ಇನ್ಸುಲೇಶನ್ ಟೇಪ್ ರೆಡಿ ಮಾಡುವ ಕಾರ್ಖಾನೆಯಲ್ಲಿ ಎರಡನೇ ಶಿಫ್ಟ್ ಬಿಡುವ ವೇಳೆಗೆ ಬೆಂಕಿ ಏಕಾಏಕಿ ಹೊತ್ತಿಕೊಂಡಿದೆ. ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾರ್ಮಿಕರು ಹೊರಗೆ ಓಡಿ ಬಂದಿದ್ದಾರೆ. ಲಿಫ್ಟ್‌ನಲ್ಲಿ ಒಬ್ಬ ಸಿಲುಕಿ ಹಾಕಿಕೊಂಡಿದ್ದಾನೆ ಎಂಬ ಮಾಹಿತಿ ಇದೆ. ಹೊರಗೆ ಬಂದವರೆಷ್ಟು?, ಒಳಗೆ ಸಿಲುಕಿಕೊಂಡವರೆಷ್ಟು? ಎಂಬ ಖಚಿತ ಮಾಹಿತಿ ಸಿಕ್ಕಿಲ್ಲ. ಹೊರ ಹೋದವರ ಬಗ್ಗೆ ಮಾಹಿತಿ ಪಡೆದು ಪೊಲೀಸರು ಸಂಪರ್ಕಿಸುತ್ತಿದ್ದಾರೆ. ಆರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸುವ ಕಾರ್ಯ ನಡೆದಿದೆ.
ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ರಕ್ಷಣೆ ಕಾರ್ಯಾಚರಣೆಯ ಬಂದೋಬಸ್ತ್ ಮಾಡಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಆಗಮಿಸಿ ಮೊಕ್ಕಾಂ ಹೂಡಿದ್ದಾರೆ. ಸ್ಥಳದಲ್ಲಿ ಐದು ಆ್ಯಂಬುಲೆನ್ಸ್‌ಗಳು ರೆಡಿಯಾಗಿವೆ.
ಐದು ಎಕರೆ ಜಾಗದಲ್ಲಿ ನಿರ್ಮಿಸಲಾಗಿರುವ ಕಾರ್ಖಾನೆ ಬೆಳಗಾವಿಯ ಅನೀಶ್ ಮೈತ್ರಾಣಿ ಎಂಬವರಿಗೆ ಸೇರಿದ್ದು ಎನ್ನಲಾಗಿದೆ. ಸದ್ಯಕ್ಕೆ ಕಾರ್ಖಾನೆ ಮಾಲೀಕ ನಮ್ಮ ಕಸ್ಟಡಿಯಲ್ಲಿದ್ದಾರೆ, ಅವರಿಂದ ಮಾಹಿತಿ ಸಂಗ್ರಹ ಮಾಡುತ್ತೇವೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ. ಮುಂಜಾಗೃತಾ ಕ್ರಮವಾಗಿ ಹೆಸ್ಕಾಂ ವಿದ್ಯುತ್ ಕಡಿತ ಮಾಡಿದೆ.
ಬೆಂಕಿ ಅವಘಡ ಸಂಭವಿಸಿದ ಕಾರ್ಖಾನೆಗೆ ಡಿಸಿ ಮೊಹ್ಮದ್ ರೋಷನ್ ಭೇಟಿ ನೀಡಿದ್ದು, ಕಾರ್ಖಾನೆಯ ಸ್ಥಿತಿ ಗತಿಯನ್ನು ಪರಿಶೀಲನೆ ನಡೆಸಿದ್ದಾರೆ. ಇಡೀ ಜಿಲ್ಲಾಡಳಿತ ಸ್ಥಳದಲ್ಲಿ ಇದೆ. ಅಗ್ನಿಶಾಮಕ, ಪೊಲೀಸರು ಸ್ಪಾಟ್‌ನಲ್ಲಿದ್ದೇವೆ. ಆಸ್ಪತ್ರೆಯಲ್ಲಿ ಇನ್ನೂರು ಬೆಡ್ ರೆಡಿ ಇಟ್ಟುಕೊಳ್ಳಲು ಹೇಳಿದ್ದೇವೆ. ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದೇವೆ. ಗ್ಯಾಸ್ ಲೀಕ್ ಆಗುವ ಚಾನ್ಸ್ ಇಲ್ಲ. ಅಕ್ಕಪಕ್ಕದ ಜನ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಡಿಸಿ ತಿಳಿಸಿದ್ದಾರೆ.
Post a comment
Log in to write reviews