ಮೆಟ್ರೋ ಟಿಕೆಟ್ ದರ ಏರಿಕೆ ಸುಳಿವು ಕೊಟ್ಟ ಬಿಎಂಆರ್ಸಿಎಲ್: ಬೆಂಗಳೂರು ಜನರಿಗೆ ಮತ್ತೊಂದು ಬೆಲೆ ಏರಿಕೆ ಬಿಸಿ ಸಾಧ್ಯತೆ
ಬೆಂಗಳೂರು : ನಮ್ಮ ಮೆಟ್ರೋ ರೈಲು ನಿಲ್ದಾಣಗಳಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾದ ಹಿನ್ನಲೆಯಲ್ಲಿ, ಮೆಟ್ರೋ ನಿಲ್ದಾಣಗಳಲ್ಲಿ ಪಿಎಸ್ಡಿ (ಪ್ಲಾಟ್ ಫಾರಂ ಸ್ಕ್ರೀನ್) ಅಳವಡಿಕೆಗೆ ಬಿಎಂಆರ್ಸಿಎಲ್ ಮುಂದಾಗಿದೆ. ಹೊಸ ಮಾರ್ಗಗಳಾದ ಗೊಟ್ಟಿಗೆರೆಯಿಂದ ನಾಗವಾರ (ಪಿಂಕ್ ಲೈನ್), ಸಿಲ್ಕ್ ಬೋರ್ಡ್ನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬ್ಲೂ ಲೈನ್ನಲ್ಲಿ ಪಿಎಸ್ಡಿ ಡೋರ್ ಅಳವಡಿಸಲು ಖಾಸಗಿ ಕಂಪನಿಗೆ 152 ಕೋಟಿ ರುಪಾಯಿ ವೆಚ್ಚದಲ್ಲಿ ಗುತ್ತಿಗೆ ನೀಡಲಾಗಿದೆ. ಹೀಗಿರುವಾಗ ಹಳೆಯ ಮೆಟ್ರೋ ಸ್ಟೇಷನ್ಗಳಿಗೂ ಪಿಎಸ್ಡಿ ಡೋರ್ ಅಳವಡಿಸಲು ಪ್ರಯಾಣಿಕರ ಒತ್ತಡ ಹೆಚ್ಚಾಗಿದೆ.
ಎಲ್ಲಾ ಮೆಟ್ರೋ ಸ್ಟೇಷನ್ಗಳಿಗೂ ಪಿಎಸ್ಡಿ ಅಳವಡಿಸಲು 700 ರಿಂದ 800 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೆಟ್ರೋ ಟಿಕೆಟ್ ದರ ಹೆಚ್ಚಿಸುವ ಕುರಿತು ಬಿಎಂಆರ್ಸಿಎಲ್ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಬಗ್ಗೆ ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶ್ವಂತ್ ಚೌವ್ಹಾಣ್ ಸುಳಿವು ನೀಡಿದ್ದಾರೆ.
ಒಂದು ಮೆಟ್ರೋ ಸ್ಟೇಷನ್ಗೆ ಪಿಎಸ್ಡಿ ಅಳವಡಿಸಲು 8 ರಿಂದ 10 ಕೋಟಿ ವೆಚ್ಚವಾಗಲಿದೆ. ಸದ್ಯ ಕಾರ್ಯಾಚರಣೆಯಲ್ಲಿರುವ ಹಸಿರು ಮತ್ತು ನೇರಳೆ ಮಾರ್ಗದ ಎಲ್ಲಾ ಮೆಟ್ರೋ ಸ್ಟೇಷನ್ಗಳಿಗೆ ಪಿಎಸ್ಡಿ ಅಳವಡಿಸಲು ಸುಮಾರು 700 ರಿಂದ 800 ಕೋಟಿ ರೂಪಾಯಿ ಆಗಲಿದೆ ಎಂದು ಅವರು ತಿಳಿಸಿದ್ದಾರೆ. ಹೀಗಾಗಿ ಟಿಕೆಟ್ ದರ ಏರಿಕೆ ಮಾಡಲು ಚಿಂತನೆ ನಡೆಸಲಾಗುತ್ತಿದೆ.
ಬಿಎಂಆರ್ಸಿಎಲ್ ಚಿಂತನೆಗೆ ಪ್ರಯಾಣಿಕರ ಆಕ್ರೋಶ
ಬ್ಯಾಂಕ್ನಲ್ಲಿ ಸಾಲ ಪಡೆದುಕೊಂಡರೆ ಪ್ರತಿ ತಿಂಗಳು ಬಡ್ಡಿ ಕಟ್ಟಬೇಕಾಗುತ್ತದೆ. ಅದನ್ನು ಪ್ರಯಾಣಿಕರ ಮೇಲೆ ಹೊರೆ ಹಾಕಬೇಕಾಗುತ್ತದೆ. ಹಾಗಾಗಿ ಟಿಕೆಟ್ ದರ ಏರಿಕೆ ಮಾಡಿದರೆ ಪಿಎಸ್ಡಿಗೆ ಬೇಕಾದ ಹಣ ಹೊಂದಿಸಲು ಸರಿ ಆಗುತ್ತದೆ ಎನ್ನುವುದು ನಮ್ಮ ಮೆಟ್ರೋ ಯೋಚನೆ. ಆದರೆ ಇದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Post a comment
Log in to write reviews