ಧಾರವಾಡ : ಹಲವು ವರ್ಷದಿಂದ ಇಲಾಖೆಯಲ್ಲಿದ್ದರೂ, ಜಿಲ್ಲಾಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರೂ ಸಭೆಗೆ ಅಂಕಿ-ಅಂಶದೊಂದಿಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಬೆವರಿಳಿಸಿದರು.
ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರ ಸಾಮಾನ್ಯ ಪ್ರಶ್ನೆಗಳಿಗೆ ಹಲವು ಇಲಾಖೆಗಳ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಸಭೆಗೆ ಬರುವ ಮುಂಚೆ ಅಂಕಿ-ಅಂಶಗಳೊಂದಿಗೆ ಬರಬೇಕೆಂದು ಹಲವು ಬಾರಿ ಸ್ಪಷ್ಟ ಸೂಚನೆ ನೀಡಿದರೂ ಕೇಳಿದ ಪ್ರಶ್ನೆಗೆ ಉತ್ತರಿಸುವುದಿಲ್ಲ. ನೀವು ನೀಡುವ ಅಂಕಿ-ಅಂಶ ಹಾಗೂ ಮಾಹಿತಿಯೊಂದಿಗೆ ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಬೇಕು. ನೀವು ತಪ್ಪು ಮಾಹಿತಿ ನೀಡುವುದು, ವಿನಾಕಾರಣ ಮುಂದಕ್ಕೆ ಹಾಕುವಂತಹ ನಡುವಳಿಕೆಯಿಂದ ಆಡಳಿತ ಹೇಗೆ ನಡೆಯಬೇಕು? ಜನರಿಗೆ ಹೇಗೆ ಉತ್ತರ ನೀಡಬೇಕೆಂದು ಅಧಿಕಾರಿಗಳನ್ನು ಸಂತೋಷ್ ಲಾಡ್ ಪ್ರಶ್ನಿಸಿದರು.
ಪಿಕನಿಕ್ ಬಂದಿರೇನ್ರಿ ? :
ಒಂದು ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹೆಸರು, ಉದ್ದು ಬೆಳೆಗಳಿಗೆ ರೈತರಿಗೆ ಎಷ್ಟು ವೆಚ್ಚ ಬರುತ್ತದೆ? ಉತ್ಪಾದನೆ ಎಷ್ಟು? ಲಾಭ ಎಷ್ಟು ತೆಗೆಯಬಹುದು? ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ. ಪ್ರತಿ ಗ್ರಾಮಪಂಚಾಯಿಗೆ ಎಂಟು ರೈತರ ಹೊಲಗಳ ಬೆಳೆ ಮಾದರಿ ಮಾತ್ರ ಸಂಗ್ರಹಿಸುತ್ತಿದ್ದು, ಈ ಸಂಖ್ಯೆ ಹೆಚ್ಚಿಸಲು ಸಾಧ್ಯವೇ?. ಹೆಚ್ಚು ಬೆಳೆ ಮಾದರಿ ಸಂಗ್ರಹಿಸಿದರೆ ಬೆಳೆವಿಮೆ ತುಂಬಿದ ಬಹುತೇಕ ರೈತರಿಗೆ ವಿಮೆ ದೊರೆಯಬಹುದೇ ಎಂಬ ಪ್ರಶ್ನೆಗೂ ಉತ್ತರ ಅಷ್ಟಕಷ್ಟೇ. ಅದೇ ರೀತಿ ತೋಟಗಾರಿಕೆ, ಮೀನುಗಾರಿಕೆ ಜಿಲ್ಲಾಮಟ್ಟದ ಅಧಿಕಾರಿಗಳು ಇಲಾಖೆಯ ಪ್ರಾಥಮಿಕ ಮಾಹಿತಿಯನ್ನು ಸಚಿವರಿಗೆ ಸ್ಪಷ್ಟವಾಗಿ ಹೇಳಲು ವಿಫಲರಾದರು. ಅದರಲ್ಲೂ ರೇಷ್ಮೆ ಇಲಾಖೆ ಅಧಿಕಾರಿಯೊಬ್ಬರು ರೇಷ್ಮೆ ಕೃಷಿ ಮಾಡಲು ತಗಲುವ ಖರ್ಚು-ವೆಚ್ಚ, ಲಾಭದ ಕುರಿತು ನಂತರ ಮಾಹಿತಿ ನೀಡುತ್ತೇನೆ ಎಂದಾಗ, ನೀವೆಲ್ಲ ಪಿಕನಿಕ್ ಬಂದಿರೇನ್ರಿ ಎಂದು ಲಾಡ್ ತರಾಟೆಗೆ ತೆಗೆದುಕೊಂಡರು.
ಸಂಬಳದ ಹಣ:
2023-24ನೇ ಅವಧಿಯಲ್ಲಿ ಅರಣ್ಯ ಇಲಾಖೆಗೆ ಬಂದ ₹ 93 ಲಕ್ಷ ದ ಪೈಕಿ ಶೇ. 50ರಷ್ಟು ಖರ್ಚು ಮಾಡದ ಹಿನ್ನೆಲೆಯಲ್ಲಿ ಮರಳಿ ಸರ್ಕಾರಕ್ಕೆ ಹೋಗಿರುವ ಕಾರಣ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ವಿವೇಕ ಕವರಿ ವಿರುದ್ಧ ಸಚಿವರು ಹರಿಹಾಯ್ದರು. ಅನುದಾನ ಬಳಕೆಯಾಗದೇ ₹ 40 ಲಕ್ಷ ಮರಳಿ ಸರ್ಕಾರಕ್ಕೆ ಹೋದ ಬಗ್ಗೆ ಸಚಿವರು ಪ್ರಶ್ನಿಸಿದಾಗ, ಕವರಿ ಅವರು ಹೈಟೆಕ್ ನರ್ಸರಿ ಮಾಡಲು ಹೋಗಿ ವಿಳಂಬವಾಯಿತು. ಹೀಗಾಗಿ ಹಣ ಮರಳಿ ಹೋಯಿತು ಎಂದರು. ಇಡೀ ದೇಶದಲ್ಲಿ ಮಾಡದಂತಹ ಹೈಟೆಕ್ ನರ್ಸರಿ ನೀವು ಮಾಡುತ್ತಿರಾ? ಅದೆಷ್ಟು ಬಾರಿ ಹೈಟೆಕ್ ನರ್ಸರಿ ಎಂದು ಹೇಳುತ್ತೀರಿ ಕಿಡಿಕಾರಿದರು. ಸರ್ಕಾರಕ್ಕೆ ಮರಳಿದ ಹಣವನ್ನು ಅಧಿಕಾರಿಯ ಸಂಬಂಳದಿಂದ ಮರಳಿಸುವಂತೆ ಅರಣ್ಯ ಇಲಾಖೆ ಸಚಿವರಿಗೆ ಪತ್ರ ಬರೆಯಲು ಜಿಲ್ಲಾಧಿಕಾರಿಗೆ ಲಾಡ್ ಸೂಚಿಸಿದರು. ಅದೇ ರೀತಿ ಸರ್ಕಾರದಿಂದ ಬಂದಿರುವ ಅನುದಾನ ಸರಿಯಾಗಿ ಬಳಕೆ ಮಾಡದೇ ಇದ್ದರೆ ಅದು ಅಧಿಕಾರಿಗಳ ಹೊಣೆ ಎಂದು ಹೇಳಿದರು.
Post a comment
Log in to write reviews