ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹೆಣ್ಣುಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ ಕಾಣೆಯಾದವರನ್ನು ಪತ್ತೆ ಹಚ್ಚುವಲ್ಲಿ ಬೆಂಗಳೂರು ಪೊಲೀಸರು ವಿಫಲರಾಗುತ್ತಿದ್ದಾರಾ ಎಂಬ ಪ್ರಶ್ನೆ ಕಾಡತೊಡಗಿದೆ. ಏಕೆಂದರೆ ಕಳೆದ 12 ವರ್ಷಗಳಲ್ಲಿ 485 ಮಹಿಳೆಯರು ಮತ್ತು ಹುಡುಗಿಯರು ನಾಪತ್ತೆಯಾಗಿದ್ದಾರೆ. ಆದರೆ ಇದುವರೆಗೂ ಅವರು ಯಾರೂ ಪತ್ತೆಯೇ ಆಗಿಲ್ಲವಂತೆ!
ವರದಿಯ ಪ್ರಕಾರ 19 ರಿಂದ 21 ವರ್ಷ ವಯಸ್ಸಿನ 173 ಹುಡುಗಿಯರು ಇನ್ನೂ ಪತ್ತೆಯಾಗಿಲ್ಲ. 16 ವರ್ಷದೊಳಗಿನ 162 ಬಾಲಕಿಯರು ಕಾಣೆಯಾಗಿದ್ದಾರೆ. 17 ರಿಂದ 18 ವರ್ಷ ವಯಸ್ಸಿನ 92 ಹುಡುಗಿಯರು ಮತ್ತು 22 ವರ್ಷ ಮೇಲ್ಪಟ್ಟ ವಯಸ್ಸಿನ 58 ಮಹಿಳೆಯರು ಪತ್ತೆಯಾಗಿಲ್ಲ. ಕಾಣೆಯಾದವರಲ್ಲಿ ಶೆ. 70 ರಷ್ಟು ಮಹಿಳೆಯರು ಮತ್ತು ಹುಡುಗಿಯರು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಸೇರಿದವರು ಎಂದು ಅಂಕಿಅಂಶಗಳ ಮೂಲಕ ತಿಳಿದುಬಂದಿದೆ.
ಪ್ರೇಮ ಪ್ರಕರಣಗಳು, ಕೌಟುಂಬಿಕ ಕಲಹ, ಮನಸ್ತಾಪ, ಆರ್ಥಿಕ ಪರಿಸ್ಥಿತಿ, ಸಾಮಾಜಿಕ ಜಾಲತಾಣದಲ್ಲಿ ಪರಿಚಿತರ ಪ್ರಭಾವ, ಅಪಹರಣ, ಕಳ್ಳಸಾಗಣೆ ಮತ್ತಿತರ ಕಾರಣದಿಂದ ಬಾಲಕಿಯರು, ಮಹಿಳೆಯರು ನಾಪತ್ತೆ ಆಗುತ್ತಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.
ಕೆಲ ಪ್ರಕರಣಗಳಲ್ಲಿ ತಮ್ಮ ಮನೆಯವರು ನಾಪತ್ತೆಯಾಗಿದ್ದಾರೆ ಎಂಬ ಗಂಭೀರ ಅಂಶವನ್ನು ಮರೆಮಾಚುವ ಕುಟುಂಬಸ್ಥರು ಅವರನ್ನು ಪತ್ತೆಹಚ್ಚಲು ತಮ್ಮದೆ ಮಾರ್ಗಗಳನ್ನು ಹುಡುಕಿಕೊಂಡು ಹೊರಡುತ್ತಾರೆ. ಅಂತಿಮವಾಗಿ ನಾಪತ್ತೆಯಾದವರನ್ನು ಪತ್ತೆಹಚ್ಚಿಕೊಳ್ಳುತ್ತಾರೆ. ಕಾಣೆಯಾದ ವ್ಯಕ್ತಿಯನ್ನು ಪತ್ತೆಹಚ್ಚಲು ಈ ಕುಟುಂಬಗಳು ಪೊಲೀಸ್ ತನಿಖೆಗಳನ್ನೂ ಮೀರಿದ ವಿಧಾನಗಳು, ಮಾರ್ಗಗಳನ್ನು ಬಳಸುತ್ತವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪರಿಸ್ಥಿತಿಯ ಸೂಕ್ಷ್ಮತೆ ಮತ್ತು ಗಂಭೀರತೆಯನ್ನು ಬಿಚ್ಚಿಟ್ಟಿದ್ದಾರೆ.
ಇನ್ನು ಕೆಲ ಕುಟುಂಬಗಳಲ್ಲಿ ಕಾಣೆಯಾದ ಯುವತಿ ಹಿಂದಿರುಗಿ ಮನೆಗೆ ಬಂದರೆ ನೆರೆಹೊರೆಯವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಅವಮಾನ ಮಾಡುತ್ತಾರೆ ಎಂದು ಹೆದರಿ ಕುಟುಂಬಸ್ಥರು ಪ್ರಕರಣದ ತನಿಖೆಗೆ ಸರಿಯಾಗಿ ಸ್ಪಂದಿಸುವುದಿಲ್ಲ. ಹಾಗೂ ತನಿಖೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನಗಳನ್ನೂ ಮಾಡುವುದಿಲ್ಲ. ಅಂತಿಮವಾಗಿ ತನಿಖಾಧಿಕಾರಿಗಳಿಗೆ ಪ್ರತಿಕ್ರಿಯಿಸುವುದನ್ನೂ ನಿಲ್ಲಿಸುತ್ತಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರು ನಿರಂತರವಾಗಿ ದೂರುದಾರರನ್ನು ಸಂಪರ್ಕಿಸುತ್ತಾರೆ, ಆದರೆ ಅವರಿಂದಲೇ ಸ್ಪಂದನೆ ಸಿಗಲ್ಲ. ಆಗ ಪ್ರಕರಣಗಳನ್ನು ಕೈಬಿಡಲಾಗುತ್ತೆ. ಅಪ್ರಾಪ್ತ ಬಾಲಕಿಯು ಓಡಿಹೋಗಿ ಮದುವೆಯಾಗಿ ಹಿಂದಿರುಗಿದಾಗ, ದೂರುದಾರರು ಹುಡುಗನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗುವುದನ್ನು ತಡೆಯಲು ಪೊಲೀಸರಿಗೆ ಮಾಹಿತಿ ನೀಡುವುದನ್ನೇ ತಪ್ಪಿಸುತ್ತಾರೆ. ಇದರಿಂದಾಗಿ ಅನೇಕ ನಾಪತ್ತೆ ಪ್ರಕರಣಗಳು ಕ್ಲೋಸ್ ಆಗುವುದಿಲ್ಲ ಎಂದು ಅ ಅಧಿಕಾರಿ ತಿಳಿಸಿದ್ದಾರೆ
Post a comment
Log in to write reviews