ಬೆಂಗಳೂರು: ಶಿಕ್ಷಣ ಇಲಾಖೆ ಶಾಲಾ-ಕಾಲೇಜುಗಳ ಅವಧಿಯಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸುವ ಕುರಿತು ಆದೇಶ ಹೊರಡಿಸಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಟಿಪ್ಪಣಿ 13/9/2007ರ ಟಿಪ್ಪಣಿಯನ್ನು ಉಲ್ಲೇಖಿಸಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ.ಎನ್.ಸೋಮಶೇಖರ್, ಸರ್ಕಾರದ ಅಧೀನ ಕಾರ್ಯದರ್ಶಿಗಳು, ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದಾರೆ. ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ದಿನಾಂಕ 13/09/2007ರ ಟಿಪ್ಪಣಿ ಹಾಗೂ ದಿನಾಂಕ 29/09/2007ರಂದು ಮಾನ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು, ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ, ಮೊಬೈಲ್ ಬಳಕೆ ಕಾಲೇಜುಗಳಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಇದು ಶಾಲಾ ಕಾಲೇಜುಗಳಲ್ಲಿಯ ಶೈಕ್ಷಣಿಕ ವಾತಾವರಣವನ್ನು ಹದಗೆಡಿಸುತ್ತಿದೆ ಎಂದು ಹೇಳಿದ್ದಾರೆ.
ಇದರ ದುಷ್ಪರಿಣಾಮ ಮಕ್ಕಳ ಮೇಲೆ ಬೀರುತ್ತಿದೆಯಲ್ಲದೇ, ಇದರಿಂದ ಕಲಿಕೆಯ ಅಮೂಲ್ಯ ಸಮಯವನ್ನು ಮೊಬೈಲ್ ಮಾತುಗಾರಿಕೆಯಲ್ಲಿ ವ್ಯಯವಾಗುತ್ತಿದೆಯೆಂಬ ಅಂಶ ಇಲಾಖೆಯ ಗಮನಕ್ಕೆ ಬಂದಿದೆ. ಅಲ್ಲದೇ ವಿದ್ಯಾರ್ಥಿಗಳು ಕ್ಲಾಸ್‌ನಲ್ಲಿ ಮೊಬೈಲ್ ಬಳಸಿ ಸಂಗೀತ ಕೇಳುವುದು, ಆಟವಾಡುವುದು ಹಾಗೂ ಎಸ್‌ಎಂಎಸ್ ಕಳುಹಿಸುವುದು ಮಾಡುತ್ತಿದ್ದು, ಇದರಿಂದ ತರಗತಿಗಳಲ್ಲಿ ಅಹಿತಕರ ವಾತಾವರಣ ಉಂಟಾಗಿ ಶೈಕ್ಷಣಿಕ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತದೆ. ಇದರೊಂದಿಗೆ ಅನೇಕ ಪಾಲಕ-ಪೋಷಕರು ಕೂಡಾ ಈ ಕುರಿತು ಅನೇಕ ಸಂದರ್ಭಗಳಲ್ಲಿ ಆತಂಕ ವ್ಯಕ್ತಪಡಿಸಿರುತ್ತಾರೆಂಬ ಅಂಶ ಸಭೆಯಲ್ಲಿ ಚರ್ಚೆಯಾಗಿ ಮಕ್ಕಳ ಕಲಿಕಾ ಸಮಯದ ರಕ್ಷಣೆಯ ಕ್ರಮವಾಗಿ ಮೊಬೈಲ್ ಉಪಯೋಗವನ್ನು ನಿಷೇಧಿಸಬೇಕೆಂಬ ಒಟ್ಟಾರೆ ಅಭಿಪ್ರಾಯ ಈ ಸಭೆಯಲ್ಲಿ ವ್ಯಕ್ತವಾಗಿರುತ್ತದೆ.
Post a comment
Log in to write reviews