ಜಮಖಂಡಿ: ಕರ್ತವ್ಯ ಲೋಪವೆಸಗಿ, ಗುತ್ತಿಗೆದಾರರೊಂದಿಗೆ ಮೋಜು ಮಸ್ತಿ ಮಾಡಿದ ಪ್ರಕರಣ ಸಂಬಂಧ ಕಾರ್ಯ ನಿರ್ವಾಹಕ ಎಂಜಿನಿಯರ್ ಸೇರಿದಂತೆ ನಾಲ್ವರಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.
ಜಿಲ್ಲಾ ಪಂಚಾಯತ್ ಕೆಲವು ಅಧಿಕಾರಿಗಳು ಕಚೇರಿ ಸಮಯದಲ್ಲಿ ಕೆಲಸಕ್ಕೆ ಚಕ್ಕರ್ ಹೊಡೆದು, ಗುತ್ತಿಗೆದಾರರೊಂದಿಗೆ ಮಧ್ಯ ಸೇವಿಸಿ ಮೋಜು ಮಸ್ತಿ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಲೋಕಸಭಾ ಚುನಾವಣೆ ನೀತಿ ಸಂಹಿತೆ ಚಾಲ್ತಿಯಲ್ಲಿದ್ದರೂ, ಕಚೇರಿಗೆ ಚಕ್ಕರ್ ಹೊಡೆದು ಜಿಪಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಎಸ್.ಎಂ.ನಾಯಕ, ಎಂಜಿನಿಯರ್‌ಗಳಾದ ರಾಮಪ್ಪ ರಾಠೋಡ, ಜಗದೀಶ ನಾಡಗೌಡ, ಗಜಾನನ ಪಾಟೀಲ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಲಾಗಿತ್ತು. ಈ ಸಂಬಂಧ 24 ಗಂಟೆಯಲ್ಲಿ ಜಿಲ್ಲಾಧಿಕಾರಿ ಕೆ.ಜಾನಕಿ ಅವರು ನೋಟಿಸ್ ಜಾರಿ ಮಾಡಿದ್ದಾರೆ.
ನೀತಿ ಸಂಹಿತೆ ಜಾರಿಯಾಗಿದ್ದರೂ ವಸತಿ ಗೃಹಗಳು ತಹಶೀಲ್ದಾರ ಸುಪರ್ದಿಗೆ ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿತ್ತು. ಆ ಪ್ರಕಾರ ಸುಪರ್ದಿಗೆ ಪಡೆದುಕೊಳ್ಳಲಾಗಿದೆಯೇ ಎಂದು ನಿರ್ದೇಶನವಿದ್ದರೂ, ಅನುಮತಿ ಇಲ್ಲದೆ ಜಿಲ್ಲಾ ಪಂಚಾಯತ್ ಅಧಿಕಾರಿ ಹಾಗೂ ಸಿಬ್ಬಂದಿಗಳು ವಸತಿ ಗೃಹದಲ್ಲಿ ಹೇಗೆ ಪ್ರವೇಶ ಮಾಡಿದ್ದಾರೆ. ಈ ವಿಷಯ ಗಂಭೀರವಾಗಿ ಪರಿಗಣಿಸಿ ಜಿಲ್ಲಾಧಿಕಾರಿಗಳು ಜಮಖಂಡಿ ತಹಶೀಲ್ದಾರ್ ಸದಾಶಿವ ಮಕ್ಕೋಜಿಯ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ.
ಜಿಲ್ಲಾ ಪಂಚಾಯತ್ ನಾಲ್ಕು ಅಧಿಕಾರಿಗಳು ಹಾಗೂ ಆರು ಜನ ಗುತ್ತಿಗೆದಾರರು ಸೇರಿ ಮಧ್ಯಾಹ್ನ ವೇಳೆ ಸರ್ಕಾರಿ ಐಬಿಯಲ್ಲಿ ಮದ್ಯ, ಮಾಂಸದ ಪಾರ್ಟಿ ಹಮ್ಮಿಕೊಂಡಿದ್ದರು. ಈ ವಿಷಯ ತಿಳಿದು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಾಗ ಈ ವಿಚಾರ ಬೆಳಕಿಗೆ ಬಂದಿತ್ತು. ಈ ಸಂಬಂಧ ನೋಟಿಸ್ ಜಾರಿಯಾಗಿದೆ.
ಜಿಪಂ ಅಧಿಕಾರಿಗಳು ಗುತ್ತಿಗೆದಾರರ ಮೂಲಕ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಈ ಬಗ್ಗೆ ಶಹರ ಪೊಲೀಸ್ ಠಾಣೆಯಲ್ಲಿ ವಿಡಿಯೋ ಮಾಡಿಕೊಂಡವರು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ನೀತಿ ಸಂಹಿತೆ ಇದ್ದರು ಅಧಿಕಾರಿಗಳದ್ದು ಅಶಿಸ್ತಿನ ನಡುವಳಿಕೆಯಾಗಿದ್ದು, ಅವರ ಮೇಲೆ ಶಿಸ್ತು ಕ್ರಮಕ್ಕೆ ವರದಿ ಸಲ್ಲಿಸಲಾಗುವುದು ಎಂದು ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ ತಿಳಿಸಿದ್ದಾರೆ.
Post a comment
Log in to write reviews