ಸೌದಿ: ಇಸ್ಲಾಂ ಧರ್ಮದ ಪವಿತ್ರ ಹಜ್ ಯಾತ್ರೆ ವೇಳೆ ಮೆಕ್ಕಾದಲ್ಲಿ ದಾಖಲಾದ 51.8 ಡಿಗ್ರಿ ಸೆಲ್ಸಿಯಸ್ ತಾಪಮಾನದಿಂದ 900ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದಾರೆ. ಈ ಪೈಕಿ 68 ಮಂದಿ ಭಾರತೀಯರೂ ಸಾವನ್ನಪ್ಪಿದ್ದಾರೆಂದು ಅರಬ್ ರಾಜತಾಂತ್ರಿಕರು ಮಾಹಿತಿ ನೀಡಿದ್ದಾರೆ. ಈ ವರ್ಷ ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ಲಕ್ಷಾಂತರ ಜನ ಹಜ್ ಯಾತ್ರೆಗೆ ತೆರಳಿದ್ದರು.
ಸೌದಿ ಅರೇಬಿಯಾದಲ್ಲಿ ವಿಪರೀತ ಶಾಖ ಮತ್ತು ಸರಿಯಾದ ವ್ಯವಸ್ಥೆಗಳ ಕೊರತೆಯಿಂದಾಗಿ ಹಜ್ ಯಾತ್ರಿಕರು ಸಾಯುತ್ತಿದ್ದು, ಜನರು ತಮ್ಮ ಕುಟುಂಬಿಕರ ದೇಹಗಳನ್ನು ವಾಪಸ್ ತಾಯ್ನಾಡಿಗೆ ಕರೆತರಲು ಸಂಕಷ್ಟ ಪಡುತ್ತಿದ್ದಾರೆ. ಆದರೆ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ಸೌದಿ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಮೆಕ್ಕಾ ಸಮೀಪದ ಅಲ್-ಮುಯಿಸಂನಲ್ಲಿ ಸೌದಿ ಸರ್ಕಾರದ ತುರ್ತು ಸೇವೆ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಜನರು ತಮ್ಮ ಕಾಣೆಯಾದ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ. ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ 900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ 18 ಲಕ್ಷಕ್ಕೂ ಜನರು ಈ ಬಾರಿ ಹಜ್ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಇನ್ನು ಹಜ್ ಯಾತ್ರೆಯಲ್ಲಿ 68 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ವರದಿ ಮಾಡಿದೆ. ಈಜಿಪ್ಟ್ ಮೂಲದ ಕನಿಷ್ಠ 600 ಜನರು ಸಾವನ್ನಪ್ಪಿದ್ದಾರೆ. ಒಂದು ದಿನದ ಹಿಂದೆ ಈ ಸಂಖ್ಯೆ 300 ಆಗಿತ್ತು. ಪ್ರಪಂಚದಾದ್ಯಂತ ಬರುವ ಸಾವಿನ ವರದಿಗಳನ್ನು ಎಣಿಸಿದ ನಂತರ ಸೌದಿ ಅರೇಬಿಯಾದಲ್ಲಿ ಹಜ್ ಯಾತ್ರೆಯ ಸಮಯದಲ್ಲಿ ಇದುವರೆಗೆ 900 ಸಾವುಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ.
Post a comment
Log in to write reviews