ಸರ್ಕಾರಕ್ಕೆ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಶಿವಮೊಗ್ಗದ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ತಲೆನೋವು ತಂದಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ನಾಗೇಂದ್ರ ಅವರ ತಲೆದಂಡಕ್ಕೆ ಪ್ರತಿಪಕ್ಷಗಳು ತೀವ್ರ ಒತ್ತಡ ಹೇರುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜೇಯೇಂದ್ರ ಪ್ರತಿಪಕ್ಷದ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನಿವಾಸದ ಮೇಲೆ ಮುತ್ತಿಗೆ ಹಾಕಲಾಗಿತ್ತು.
ಈ ಹಿಂದೆ ಕಾಂಟ್ರ್ಯಾಕ್ಟರ್ ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಅಂದಿನ ಬಿಜೆಪಿ ಸಚಿವ ಈಶ್ವರಪ್ಪ ಅವರ ತಲೆದಂಡಕ್ಕೆ ಕಾಂಗ್ರೆಸ್ ತೀವ್ರ ಹೋರಾಟ ಮಾಡಿ ಈಶ್ವರಪ್ಪ ಅವರ ರಾಜೀನಾಮೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಸದ್ಯ ಇದೇ ಹಾದಿ ಹಿಡಿದಿರುವ ಬಿಜೆಪಿ ರಾಜ್ಯಾದ್ಯಂತ ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವ ವಿಚಾರಕ್ಕೆ ರಣತಂತ್ರ ರೂಪಿಸಿದೆ. ಈ ಪ್ರಕರಣ ಕಾಂಗ್ರೆಸ್ ಸರ್ಕಾರಕ್ಕೆ ತಲೆನೋವಾಗಿದೆ.
ಸಚಿವ ನಾಗೇಂದ್ರ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು 11 ಗಂಟೆಗೆ ಕಾವೇರಿ ನಿವಾಸದಲ್ಲಿ ಸಿಎಮ್, ಡಿಸಿಎಮ್, ಸಭೆ ನಡೆಸುತ್ತಿದ್ದಾರೆ. ಪ್ರಕರಣ ಸಿಬಿಐ ಗೆ ವರ್ಗಾವಣೆಯಾದರೆ ತಲೆನೋವು ಎಂಬ ಚರ್ಚೆಯ ಹಿನ್ನೆಲೆಯಲ್ಲಿ, ಈ ಕುರಿತು ಇಂದು ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸಿಐಡಿ ತನಿಖೆಯ ನಂತರ ಕ್ರಮ ಕೈಗೊಳ್ಳುವ ಸಾಧ್ಯತೆ ಇತ್ತಾದರೂ ಆರ್ಬಿಐ ನಿಯಮದ ಪ್ರಕಾರ ಹತ್ತು ಕೋಟಿಗೂ ಹೆಚ್ಚು ಹಣ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಸಿಬಿಐ ನಿಂದ ತನಿಖೆ ನಡೆಯುವ ಅವಕಾಶಗಳಿದ್ದು, ಮುಖಭಂಗ ತಪ್ಪಿಸಿಕೊಳ್ಳಲು ಇಂದು ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆಯಬಹುದು ಎಂದು ಮೂಲಗಳು ಸಮಯ ನ್ಯೂಸ್‌ಗೆ ತಿಳಿಸಿವೆ.
Post a comment
Log in to write reviews