ನರೇಂದ್ರ ಮೋದಿ ದೇವ ದೂತನಂತೆ. ದೇವಾಲಯ ಕಟ್ಟಿ, ಪೂಜೆ ಪುನಸ್ಕಾರ ನಡೆಸಿ ಪ್ರಸಾದ ಹಂಚಿ : ಮಮತಾ ಬ್ಯಾನರ್ಜಿ ವ್ಯಂಗ್ಯ..!
ಕೋಲ್ಕತ್ತ: ರಾಷ್ಟ್ರೀಯ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ನನ್ನ ತಾಯಿ ಬದುಕಿರುವವರೆಗೂ, ನನ್ನ ಜನನ ಸ್ವಾಭಾವಿಕ ಪ್ರಕ್ರಿಯೆ ಎಂದು ಭಾವಿಸುತ್ತಿದ್ದೆ. ಆದರೆ, ನನ್ನ ತಾಯಿ ನಿಧನದ ನಂತರ, ನನಗಿರುವ ಅನುಭವವನ್ನು ನೋಡಿ, ನನ್ನನ್ನು ದೇವರು ಭೂಮಿಗೆ ಕಳುಹಿಸಿದ್ದಾರೆ ಎಂದು ಭಾವಿಸಿದ್ದೇನೆ ಎಂದು ಪ್ರಧಾನಿಗಳು ಹೇಳಿದ್ದರು, ನನಗೆ ಈಗಿರುವ ಸಾಮರ್ಥ್ಯ ಅದು ನನ್ನದಲ್ಲ, ಅದು ನನಗೆ ದೇವರು ಕೊಟ್ಟಿರುವ ಶಕ್ತಿ. ಹಾಗಾಗಿಯೇ, ನನಗೆ ದೇವರು ಶಕ್ತಿ, ಸ್ವಚ್ಚ ಹೃದಯ, ಸಾಮರ್ಥ್ಯವನ್ನು ನೀಡಿದ್ದಾನೆ. ನಾನು ಏನೂ ಅಲ್ಲ, ಆದರೆ ನಾನು ದೇವರ ದೂತ ಎಂದು ಮೋದಿ, ಸಂದರ್ಶನದಲ್ಲಿ ಹೇಳಿದ್ದಾರೆ. ಇವರ ಈ ಮಾತಿಗೆ ಮಥುರಾಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವಾಗ ಮಮತಾ ಬ್ಯಾನರ್ಜಿ ಅವರು ತಿರುಗೇಟು ನೀಡಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಬಿಜಿಪಿಗೆ ಸೋಲಿನ ಭೀತಿ ಎದುರಾಗಿದೆ, ಹಾಗಾಗಿ ಸುಳ್ಳುಗಳನ್ನು ಹೇಳುತ್ತಾ ಜನರನ್ನು ದಾರಿ ತಪ್ಪಿಸುತಿದ್ದಾರೆ, ಸುಳ್ಳನ್ನು ಹೇಳಿ ಪ್ರಧಾನಿ ಮೋದಿಯಂತವರು ದೇವರ ಪ್ರತಿನಿಧಿಯಾಗಲು ಸಾಧ್ಯವೇ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದಾರೆ, ತಮ್ಮನ್ನು ತಾವು ದೈವೀಪುತ್ರ ಎಂದು ಚುನಾವಣಾ ಸಭೆಯಲ್ಲಿ ಕರೆಸಿಕೊಳ್ಳುತ್ತಿದ್ದಾರೆ. ಎನ್‌ಆರ್‌ಸಿ ಹೆಸರಿನಲ್ಲಿ ಅಮಾಯಕರನ್ನು ಜೈಲಿಗೆ ಹಾಕಿ, ಜಾಹೀರಾತುಗಳಲ್ಲಿ ಸುಳ್ಳು ಮಾಹಿತಿಯನ್ನು ನೀಡುವ ಪ್ರಧಾನಿ ಮೋದಿ, ದೇವರು ಆಗಲು ಸಾಧ್ಯವೇ ಎಂದು ಮಮತಾ ಬ್ಯಾನರ್ಜಿ ಲೇವಡಿ ಮಾಡಿದ್ದಾರೆ, ಜನರ ನಡುವೆ ವೈಷ್ಯಮ್ಯತೆಯನ್ನು ಸೃಷ್ಟಿಸುವ ಇವರುಗಳನ್ನು ದೇವರು ತನ್ನ ದೂತನನ್ನಾಗಿ ಕಳುಹಿಸುತ್ತಾನೆಯೇ..!? ಈಗ ಚುನಾವಣೆಯ ವೇಳೆ ತಮ್ಮನ್ನು ತಾವು ದೇವರ ಮಗ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂತಹ ವ್ಯಕ್ತಿಗಳು ದೇವರ ದೂತ ಆಗಲು ಸಾಧ್ಯವೇ ಎಂದು ಮಮತಾ ವ್ಯಂಗ್ಯವಾಡಿದ್ದಾರೆ.
24 ಪರಗಣ ಜಿಲ್ಲೆಯ ಮಥುರಾಪುರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮಮತಾ, 2014ರಲ್ಲಿ ಪ್ರತೀ ಭಾರತೀಯರ ಅಕೌಂಟಿಗೆ ಹದಿನೈದು ಲಕ್ಷ ರೂಪಾಯಿ ಜಮೆ ಮಾಡುತ್ತೇವೆ ಎಂದು ಸುಳ್ಳು ಹೇಳಿ ಅಧಿಕಾರಕ್ಕೆ ಬಂದರು, ಇವರ ಮೂಲಕ ದೇವರು ದುಡ್ಡು ಹಾಕಲು ಸಾಧ್ಯವೇ ಎಂದು ಕಾಲೆಳೆದರು. ಪುರಿಯ ಜಗನ್ನಾಥ ದೇವರೇ ಪ್ರಧಾನಿ ಮೋದಿಯವರ ಭಕ್ತ ಎಂದು ಅವರ ಪಕ್ಷದ ನಾಯಕರು ಹೇಳಿದ್ದಾರೆ. ಹಾಗಾದರೆ, ಅವರ ಹೆಸರಿನಲ್ಲಿ ಒಂದು ದೇವಾಲಯ ಕಟ್ಟಿ, ಪೂಜೆ ಪುನಸ್ಕಾರ ನಡೆಸಿ ಪ್ರಸಾದ ಹಂಚಬೇಕಲ್ಲವೇ ಎಂದು ಮಮತಾ ಕಿಡಿಕಾರಿದ್ದಾರೆ.
ಪುರಿ ಲೋಕಸಭಾ ಕ್ಷೇತ್ರದ ಚುನಾವಣೆ ವೇಳೆ, ’ ಪುರಿಯ ಜಗನ್ನಾಥಸ್ವಾಮಿ, ಪ್ರಧಾನಿ ಮೋದಿಯವರ ಭಕ್ತ’ ಎಂದು ಬಿಜೆಪಿ ನಾಯಕ ಸಂಬೀತ್ ಪಾತ್ರ ಹೇಳಿದ್ದರು. ಸಂಬೀತ್, ಪುರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಈ ಹೇಳಿಕೆ ಬಾಯಿ ತಪ್ಪಿ ಹೇಳಿದ್ದೇನೆ, ಇದರ ಪರಿಹಾರಾರ್ಥವಾಗಿ ಮೂರು ದಿನ ಉಪವಾಸ ಇರುವುದಾಗಿ ಸಂಬೀತ್ ಪಾತ್ರ ನಂತರ ಸ್ಪಷ್ಟನೆಯನ್ನೂ ಕೊಟ್ಟಿದ್ದರು.
Post a comment
Log in to write reviews