ಗಾಝಾ: ಕೇಂದ್ರ ಗಾಝಾ ಪಟ್ಟಿಯಲ್ಲಿರುವ ದೀರ್ ಅಲ್-ಬಲಾಹ್‌ನ ನಿವಾಸಿಗಳ ಸ್ಥಳಾಂತರಕ್ಕೆ ಇಸ್ರೇಲ್ ನೀಡಿರುವ ಹೊಸ ಆದೇಶವು ಗಾಝಾದಲ್ಲಿ ನೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ವಿಶ್ವಸಂಸ್ಥೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.
ಗಾಝಾದಲ್ಲಿ ಈಗ ಸೃಷ್ಟಿಯಾದ ಪರಿಸ್ಥಿತಿ ನೆರವು ವಿತರಿಸಲು ಪೂರಕವಾಗಿಲ್ಲ. ಮೇ ತಿಂಗಳಲ್ಲಿ ದಕ್ಷಿಣ ಗಾಝಾದ ರಫಾ ನಗರದಿಂದ ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ನೀಡಿದ ಆದೇಶದಿಂದಾಗಿ ಗಾಝಾ ಪಟ್ಟಿಯಲ್ಲಿ ತನ್ನ ಮುಖ್ಯ ಕಾರ್ಯಾಚರಣೆಗಳನ್ನು ಮತ್ತು ಹೆಚ್ಚಿನ ಸಿಬ್ಬಂದಿಯನ್ನು ದೀರ್ ಅಲ್-ಬಲಾಹ್‌ಗೆ ಸ್ಥಳಾಂತರಿಸಲಾಗಿತ್ತು. ಈಗ ಇಲ್ಲಿಂದಲೂ ಸ್ಥಳಾಂತರಗೊಳ್ಳಲು ಹೇಳಿದರೆ ನಾವು ಎಲ್ಲಿಗೆ ತೆರಳಬೇಕು ಎಂದು ತಿಳಿಯುತ್ತಿಲ್ಲ. ಸ್ಥಳಾಂತರಗೊಳ್ಳಲು ಹೆಚ್ಚಿನ ಸಮಯಾವಕಾಶವೂ ಇಲ್ಲದ ಕಾರಣ ನಮ್ಮ ಉಪಕರಣಗಳು ಬಾಕಿ ಉಳಿದಿವೆ ಎಂದು ಅವರು ಹೇಳಿದ್ದಾರೆ.
ಆದರೆ ನಾವು ಗಾಝಾವನ್ನು ತೊರೆಯುವುದಿಲ್ಲ, ಯಾಕೆಂದರೆ ಅಲ್ಲಿನ ಜನರಿಗೆ ನಾವು ಅಲ್ಲಿರುವ ಅಗತ್ಯವಿದೆ. ವಿಶ್ವಸಂಸ್ಥೆ ಸಿಬ್ಬಂದಿಯ ಸುರಕ್ಷತೆ ಮತ್ತು ಭದ್ರತೆಯ ಅಗತ್ಯದೊಂದಿಗೆ ಜನಸಮುದಾಯದ ಅಗತ್ಯವನ್ನು ಸಮತೋಲನಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ವಿಶ್ವಸಂಸ್ಥೆಯ ಅಧಿಕಾರಿ ಹೇಳಿದ್ದಾರೆ.
ಕೇಂದ್ರ ಗಾಝಾದಲ್ಲಿ ಇಸ್ರೇಲ್ ಸೇನೆಯ ಈಗಿನ ಸ್ಥಳಾಂತರ ಆದೇಶವು ವಿಶ್ವಸಂಸ್ಥೆಯ ಮಾನವೀಯ ನೆರವು ಕಾರ್ಯಾಚರಣೆಗೆ ತೊಡಕಾಗಿದೆ ಎಂದು ವಿಶ್ವಸಂಸ್ಥೆಯ ಮೂಲಗಳನ್ನು ಉಲ್ಲೇಖಿಸಿ ಅಲ್ ಜಝೀರಾ ವರದಿ ಮಾಡಿದೆ.
Post a comment
Log in to write reviews