ಯಾರು ಬೇಕಾದರೂ ಬಯ್ಯಲಿ, ನಾನು ನೀರಿನ ಬೆಲೆ ಏರಿಕೆ ಮಾಡಿಯೇ ಮಾಡ್ತಿನಿ : ಡಿಸಿಎಂ ಡಿಕೆ ಶಿವಕುಮಾರ್
ಬೆಂಗಳೂರು: ರಾಜಧಾನಿಯಲ್ಲಿ ಕುಡಿಯುವ ನೀರಿನ ದರ ಏರಿಕೆ (Water Price Hike) ಮಾಡಲೇಬೇಕಿದೆ. ಜಲಮಂಡಳಿ (Bangalore Water Supply and Sewerage Board) ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡಲು ಹಣವಿಲ್ಲ. ಯಾರು ಏನು ಹೇಳಿದರೂ ನಾನು ನೀರಿನ ಬೆಲೆ ಏರಿಸುವವನೇ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹೇಳಿದ್ದಾರೆ.
ನೀರಿದ ದರ 8-9 ವರ್ಷದಿಂದ ಏರಿಕೆ ಮಾಡಿಲ್ಲ. ನೀರಿನ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗಬೇಕು. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡೋಕೆ ಆಗುತ್ತಿಲ್ಲ. ಮಂಡಳಿಯ ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್‌ಗೆ ನೋಡಿ ದರ ನಿಗದಿ ಮಾಡಬೇಕು. ಎಷ್ಟು ದರ ಏರಿಕೆ ಮಾಡಬೇಕು ಅಂತ ನಿರ್ಧಾರ ಮಾಡಿಲ್ಲ. ಕಮಿಟಿ ಸಭೆ ಮತ್ತು ಕ್ಯಾಬಿನೆಟ್‌ನಲ್ಲಿ ತೀರ್ಮಾನ ಮಾಡುತ್ತೇವೆ. ಆದರೆ ಇಂದಿನ ಕ್ಯಾಬಿನೆಟ್ ಮೀಟಿಂಗ್‌ನಲ್ಲಿ ಈ ವಿಷಯ ಇಲ್ಲ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನಾಗರಿಕರಿಗೆ ಎಷ್ಟು ಮಾಡಿದರೂ ಅಷ್ಟೆ, ಅವರಿಗೆ ಉಪಕಾರ ಸ್ಮರಣೆ ಇಲ್ಲ. ಬೈತಾರೆ, ಕಾಮೆಂಟ್ ಮಾಡ್ತಾರೆ, ವಾಟ್ಸ್ಯಾಪ್‌ನಲ್ಲಿ ಹಾಕ್ತಾರೆ. ನಂತರ ಮರೆತು ಬಿಡ್ತಾರೆ. ನೀರು ಕೊಟ್ಟರೆ ತಗೋತಾರೆ ಅಷ್ಟೆ. ಕೆಲವರು ದುಡ್ಡು ಕಟ್ಟುವವರು ಕಟ್ಟುತ್ತಾರೆ, ಕೆಲವರು ಕಟ್ಟಲ್ಲ. ಮೀಡಿಯಾದವರಾದರೂ ಬೈಯಲಿ, ಜನರಾದರೂ ಬಯ್ಯಲಿ, ವಿರೋಧ ಪಕ್ಷದವರಾದರೂ ವಿರೋಧ ಮಾಡಲಿ. ಕಂಪನಿ ಉಳಿಯಬೇಕಾಗಿದೆ ಅದಕ್ಕಾಗಿ ನಾವು ನೀರಿನ ದರ ಹೆಚ್ಚಳ ಮಾಡಿಯೇ ಮಾಡುತ್ತೇವೆ ಎಂದು ಡಿಕೆಶಿ ಹೇಳಿದರು.
ನೀರಿನ ದರ ಸಾಕಷ್ಟು ವರ್ಷದಿಂದ ಏರಿಸಿಲ್ಲ. 1.40 ಕೋಟಿ ಜನಸಂಖ್ಯೆ ಬೆಂಗಳೂರಿನಲ್ಲಿ ಇದೆ. ಮೇಕೆದಾಟು ಯೋಜನೆ ಬಗ್ಗೆ ನನಗೆ ಭರವಸೆ ಇದ್ದು, ಆದಷ್ಟು ಬೇಗ ಅದು ಆಗಲಿದೆ. ಶರಾವತಿ ಕುಡಿಯುವ ನೀರಿನ ಯೋಜನೆಯೂ ಇದ್ದು ಅದಕ್ಕೆ ಆ ಭಾಗದಲ್ಲಿ ವಿರೋಧವಿದೆ. ಎತ್ತಿನ ಹೊಳೆ ಯೋಜನೆಯೂ ಒಂದು ಹಂತದಲ್ಲಿ ಇದೆ. ನೀರಾವರಿ ಯೋಜನೆಯಲ್ಲಿ ಹೊಸ ಬಿಲ್ ತಂದಿದ್ದೇವೆ. ನೀರಿನ ಕಾಲುವೆಗಳ ಅಕ್ಕಪಕ್ಕ ಅರ್ಧ ಕಿಮೀನಲ್ಲಿ ಯಾರೂ ಬೋರ್‌ವೆಲ್ ಕೊರೆಯುವಂತಿಲ್ಲ. ಯಾರೂ ಕಾಲುವೆಗಳಿಂದ ನೇರವಾಗಿ ನೀರು ಟ್ಯಾಪ್ ಮಾಡುವಂತಿಲ್ಲ. ರಾಜ್ಯಪಾಲರು ಸಹಿ ಹಾಕಿದ್ದಾರೆ, ಹೊಸ ಕಾನೂನು ಬಂದಿದೆ ಎಂದು ಅವರು ವಿವರಿಸಿದರು.
Post a comment
Log in to write reviews