ಕೊಲಂಬೊ: ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದ ಭಾರತ ತಂಡ, ಶುಕ್ರವಾರದಿಂದ ಆರಂಭಗೊಳ್ಳಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.
ಗೌತಮ್ ಗಂಭೀರ್ ನೇತೃತ್ವದ ಟೀಂ ಮ್ಯಾನೇಜ್‌ಮೆಂಟ್‌ಗೆ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸವಾಲು ಎದುರಾಗಲಿದ್ದು, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಸೂಕ್ತ ಆಟಗಾರರನ್ನು ಗುರುತಿಸುವ ಕೆಲಸವನ್ನು ಗಂಭೀರ್ ಈಗಿನಿಂದಲೇ ಆರಂಭಿಸಲಿದ್ದಾರೆ.
ಸರಣಿಯಿಂದ ವಿಶ್ರಾಂತಿ ಪಡೆಯಲು ಬಯಸಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಆಯ್ಕೆಗೆ ಲಭ್ಯವಿರುವಂತೆ ಗಂಭೀರ್ ಸೂಚಿಸಿದ್ದರು ಎನ್ನುವ ಸುದ್ದಿ ಹರಿದಾಡಿತ್ತು. ನಿರೀಕ್ಷೆಯಂತೆ ಇಬ್ಬರೂ ಹಿರಿಯ ಆಟಗಾರರು ತಂಡದಲ್ಲಿದ್ದು, ಎಲ್ಲರ ಕಣ್ಣು ಅವರ ಮೇಲೆ ಇರಲಿದೆ.
ಇನ್ನು ವಿಕೆಟ್ ಕೀಪರ್-ಬ್ಯಾಟರ್ ಸ್ಥಾನಕ್ಕೆ ಕೆ.ಎಲ್.ರಾಹುಲ್ ಹಾಗೂ ಪಂತ್ ನಡುವೆ ಪೈಪೋಟಿ ಏರ್ಪಡಲಿದೆ. ಕಳೆದ ವರ್ಷ ಏಷ್ಯಾ ಕಪ್‌ನಿಂದ ರಾಹುಲ್ ತಂಡದ ಕೀಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಬ್ಯಾಟಿಂಗ್‌ನಲ್ಲೂ ಮಿಂಚಿದ್ದಾರೆ. ಆದರೆ, ಗಂಭೀರ್ ರಾಹುಲ್' ರನ್ನೇ ಮುಂದುವರಿಸಲಿದ್ದಾರೆಯೇ ಅಥವಾ ಪಂತ್ ಮೇಲೆ ಹೆಚ್ಚು ವಿಶ್ವಾಸ ಇರಿಸಲಿದ್ದಾರೆಯೇ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಇನ್ನು, ಶ್ರೇಯಸ್ ಅಯ್ಯರ್ ಮೇಲೂ ಎಲ್ಲರ ಕಣ್ಣಿದೆ. ವೈಯಕ್ತಿಕ ಕಾರಣಗಳಿಂದ ಹಾರ್ದಿಕ್ ಪಾಂಡ್ಯ ಸರಣಿಗೆ ಗೈರಾಗಲು ನಿರ್ಧರಿಸಿದ್ದು, ಶಿವಂ ದುಬೆ ಅಥವಾ ರಿಯಾನ್ ಪರಾಗ್‌ಗೆ ಸ್ಥಾನ ಸಿಗಬಹುದು. ಇತ್ತೀಚೆಗೆ ಮುಕ್ತಾಯಗೊಂಡ ಟಿ20 ಸರಣಿಯಲ್ಲಿ ಪರಾಗ್ ಬೌಲಿಂಗ್‌ನಲ್ಲೂ ಮಿಂಚಿದ ಕಾರಣ, ಏಕದಿನದಲ್ಲೂ ಅವರನ್ನೇ ಆಡಿಸುವ ಸಾಧ್ಯತೆ ಹೆಚ್ಚಿದೆ.
ಜಸ್‌ಪ್ರೀತ್ ಬೂಮ್ರಾಗೆ ವಿಶ್ರಾಂತಿ ನೀಡಿರುವ ಕಾರಣ, ಮೊಹಮದ್ ಸಿರಾಜ್ ಬೌಲಿಂಗ್ ಪಡೆಯನ್ನು ಮುನ್ನಡೆಸಲಿದ್ದಾರೆ. ಅರ್ಶ್‌ದೀಪ್ ಸಿಂಗ್, ಖಲೀಲ್ ಅಹ್ಮದ್ ಇಬ್ಬರು ಎಡಗೈ ವೇಗಿಗಳಿದ್ದು, ಹರ್ಷಿತ್ ರಾಣಾ ಪಾದಾರ್ಪಣೆ ಮಾಡುವ ನಿರೀಕ್ಷೆ ಇದೆ. ಕುಲೀಪ್ ಯಾದವ್, ಅಕ್ಷರ್ ಪಟೇಲ್ ಸ್ಪಿನ್ನರ್ ಗಳಾಗಿ ಆಡಲಿದ್ದಾರೆ.
ಇನ್ನು ಲಂಕಾ ತಂಡವನ್ನು ಚರಿತ್ ಅಸಲಂಕ ಮುನ್ನಡೆಸಲಿದ್ದು, ಗಾಯದ ಸಮಸ್ಯೆ ಕಾರಣ ಹಲವು ಆಟಗಾರರು ಹೊರಬಿದ್ದಿದ್ದಾರೆ. ಹೀಗಾಗಿ, ತಂಡ ಸರಣಿ ಆರಂಭಕ್ಕೂ ಮೊದಲೇ ಸಂಕಷ್ಟಕ್ಕೆ ಗುರಿಯಾಗಿದೆ.
ಪಂದ್ಯ ಆರಂಭ ನೇರ ಪ್ರಸಾರ:
ಮಧ್ಯಾಹ್ನ 2.30ಕ್ಕೆ, ಸೋನಿ ಸ್ಪೋರ್ಟ್ಸ್
Post a comment
Log in to write reviews