ದೆಹಲಿ: ಕೇಂದ್ರದ ನೂತನ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವರಾದ ಎಚ್‌ಡಿ ಕುಮಾರಸ್ವಾಮಿ, ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷರಾದ ಅಮರೀಂದು ಪ್ರಕಾಶ್ ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಭಾರತೀಯ ಉಕ್ಕು ಪ್ರಾಧಿಕಾರದ (SAIL) ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಅಧಿಕಾರಿಗಳು SAIL ಸಂಸ್ಥೆಯ ಯೋಜನೆ ಮತ್ತು ಚಟುವಟಿಕೆಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿ, ಬಿಲಾಯ್ ಸೇರಿ ಇನ್ನಿತರೆ ಉಕ್ಕು ತಯಾರಿಕಾ ಘಟಕಗಳಿಗೆ ಭೇಟಿ ನೀಡುವಂತೆ ಸಲಹೆ ನೀಡಿದ್ದಾರೆ. ಈ ವೇಳೆ ಸಚಿವರು ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಶ್ಚೇತನದ ಬಗ್ಗೆಯೂ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು. ಕುದುರೆಮುಖದಲ್ಲಿ ಸಿಗುತ್ತಿದ್ದ ಕಬ್ಬಿಣದ ಅದಿರು ಜಗತ್ತಿನಲ್ಲಿಯೇ ಶ್ರೇಷ್ಠ ಗುಣಮಟ್ಟದ ಅದಿರು ಎಂದು ಅಧಿಕಾರಿಗಳು ಹೇಳಿದ್ದಕ್ಕೆ ಸಚಿವರು ಸಾಧ್ಯಾಸಾಧ್ಯತೆಗಳು, ಅವಕಾಶಗಳ ಬಗ್ಗೆ ಶೀಘ್ರವೇ ಸಮಗ್ರ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.
ಬೃಹತ್ ಕೈಗಾರಿಕೆ ಖಾತೆಯನ್ನು ತಮಗೇ ಕೊಟ್ಟಿರುವ ಕಾರಣ ಉಕ್ಕು ಖಾತೆಗೆ ಹೆಚ್ಚು ಸಹಾಯ ಆಗುತ್ತಿದೆ. ಅಲ್ಲದೇ ಬೆಂಗಳೂರಿನಲ್ಲಿ ಉಕ್ಕು ಸಂಶೋಧನಾ ಕೇಂದ್ರ ಸ್ಥಾಪಿಸಿದರೆ ಉಕ್ಕು ಸಂಶೋಧನೆ ಮತ್ತು ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟರೆ ಕೈಗಾರಿಕೆಗಳಿಗೆ ಅನುಕೂಲವಾಗುವುದು.
ಕಂಪೀಟ್ ವಿತ್ ಚೀನಾ ಪರಿಕಲ್ಪನೆ ಬಗ್ಗೆ ವಿವರಣೆ
ಮೋದಿ ಅವರ ಕನಸು, ಮೇಕ್ ಇನ್ ಇಂಡಿಯಾ ಪರಿಕಲ್ಪನೆ, ಉತ್ಪಾದನೆ ಹೆಚ್ಚಳ, ಉದ್ಯೋಗ ಸೃಷ್ಟಿ, ಭಾರತವನ್ನು 3ನೇ ಆರ್ಥಿಕ ಶಕ್ತಿ ಮಾಡುವ ಪ್ರಧಾನಿಗಳ ಗುರಿಗೆ ಸಾಥ್ ನೀಡೋಣ ಎಂದು ಅಧಿಕಾರಿಗಳಿಗೆ ಹೆಚ್ ಡಿ ಕುಮಾರಸ್ವಾಮಿ ಹೇಳಿದರು. ಇಡೀ ದೇಶದ ಎಲ್ಲ ರಾಜ್ಯಗಳ ಅಭಿವೃದ್ಧಿ ನನ್ನ ಗುರಿ. ಇಲಾಖೆಗೆ ಸಂಬಂಧಿಸಿದ ಎಲ್ಲ ವಿಷಯಗಳ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡೋಣ ಎಂದು ಹೇಳಿದ್ದಾರೆ. ತಾನು ಸಿಎಂ ಆಗಿದ್ದ ವೇಳೆ ಕರ್ನಾಟಕದಲ್ಲಿ ಕೈಗಾರಿಕೆ ಕ್ಷೇತ್ರದಲ್ಲಿ ತಾವು ಮಾಡಿದ್ದ ಕೆಲಸಗಳ ಮಾಹಿತಿಯನ್ನು ಅಧಿಕಾರಿಗಳಿಗೆ ಹೆಚ್‌ಡಿ ಕುಮಾರಸ್ವಾಮಿ ತಿಳಿಸಿದರು.
ಅವಕಾಶ ಇರುವ ಕೈಗಾರಿಕೆಗಳನ್ನು ಪುನಃಶ್ಚೇತನ ಮಾಡೋಣ. ಸುಖಾ ಸುಮ್ಮನೆ ಜನರ ತೆರಿಗೆ ಹಣ ಪೋಲು ಮಾಡೋದು ಬೇಡ. ಪ್ರಧಾನಿಗಳು ಬಹಳ ವಿಶ್ವಾಸ ಇಟ್ಟು ಮಹತ್ವದ ಖಾತೆಗಳನ್ನು ಕೊಟ್ಟಿದ್ದಾರೆ. ಅವರ ನಿರೀಕ್ಷೆ ಹುಸಿ ಆಗಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾರೆ.
Post a comment
Log in to write reviews