ಮಳೆಗೆ ಪೊಲೀಸ್ ಠಾಣೆ ಸೋರಿಕೆ: ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಗ್ರಾಮಸ್ಥರಿಂದ ಮನವಿ
ದಾವಣಗೆರೆ: ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರಗೆರೆಯಲ್ಲಿರುವ ಹೊರ ಪೊಲೀಸ್ ಠಾಣೆಯು ಮಳೆಯಿಂದ ಸೋರುತ್ತಿದೆ. ಸತತವಾಗಿ ಸುರಿಯುತ್ತಿರುವ ಮಳೆಯಿಂದ ಗೋಡೆಗಳೆಲ್ಲ ಬಿರುಕು ಬಿಟ್ಟಿದ್ದು, ಅಲ್ಲಲ್ಲಿ ಸೋರುತ್ತಿದೆ. ಮೇಲ್ಛಾವಣಿ ಕೂಡ ಕುಸಿದು ಬೀಳುವ ಹಂತದಲ್ಲಿದೆ. ಇದೇ ಆತಂಕದಲ್ಲಿ ಸಿಬ್ಬಂದಿ ಪ್ರತಿನಿತ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಠಾಣೆಯ ಗೋಡೆಗಳು ನೆನೆದಿದ್ದು, ಕೂಡಲೇ ದುರಸ್ತಿ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಠಾಣೆ ಸಂಪೂರ್ಣ ಶಿಥಿಲಗೊಂಡಿದೆ. ರಕ್ಷಣೆ ನೀಡುವ ಪೊಲೀಸರಿಗೆ ರಕ್ಷಣೆ ಇಲ್ಲದಂತಾಗಿದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲೇ ಸಿಬ್ಬಂದಿ ಪ್ರತಿನಿತ್ಯ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಸಿಬ್ಬಂದಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪೊಲೀಸ್ ಠಾಣೆ ಬಗ್ಗೆ ಗ್ರಾಮಸ್ಥರ ಕಾಳಜಿ; "ಇದು ಬಹಳ ಹಳೇ ಕಾಲದ ಪೊಲೀಸ್ ಠಾಣೆಯಾಗಿದ್ದು, ಈಗ ಈ ಕಟ್ಟಡ ಕೆಲಸ ಮಾಡಲು ಯೋಗ್ಯವಾಗಿಲ್ಲ. ಠಾಣೆ ಸೋರುತ್ತಿದ್ದು, ಮೇಲ್ಛಾವಣಿ ಕಳಚಿ ಬೀಳುವ ಹಂತ ತಲುಪಿದೆ. ಯಾವಾಗ ಬೀಳುತ್ತೆ ಎಂಬ ಚಿಂತೆಯಲ್ಲಿದ್ದಾರೆ. ಸಿಬ್ಬಂದಿ ಕೆಲಸ ಮಾಡಲು ಇಷ್ಟಪಡುತ್ತಿಲ್ಲ. ಮಳೆ ಬಂದರೆ ಠಾಣೆಯಲ್ಲಿ ಅರ್ಧ ಅಡಿ ನೀರು ನಿಲ್ಲುತ್ತದೆ. ಒಬ್ಬರೇ ಪೊಲೀಸ್ ಕಾನ್ಸ್ಟೇಬಲ್ ನಿಯೋಜನೆ ಮಾಡಿದ್ದು, ಕಳ್ಳತನಗಳು ಹೆಚ್ಚಾಗಿವೆ. ಕಟ್ಟಡ ದುರಸ್ತಿ ಮಾಡಿಸಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡುವಂತೆ" ಗ್ರಾಮಸ್ಥ ಚನ್ನಬಸಪ್ಪ ಪೊಲೀಸ್ ಠಾಣೆ ಮೇಲಿನ ಕಾಳಜಿಯಿಂದ ಇಲಾಖೆಗೆ ಒತ್ತಾಯಿಸಿದರು.
''ಚನ್ನಗಿರಿ ತಾಲೂಕಿನ ತಾವರಗೆರೆ ಹೊರ ಪೊಲೀಸ್ ಠಾಣೆ ಹಳೇ ಕಟ್ಟಡ ಆಗಿದ್ದರಿಂದ ಸೋರುತ್ತಿದೆ. ಈ ಬಗ್ಗೆ ಲೋಕೋಪಯೋಗಿ (PWD) ಇಲಾಖೆಯ ಗಮನಕ್ಕೂ ತರಲಾಗಿದೆ. ವರದಿಗಾಗಿ ಕಾಯುತ್ತಿದ್ದೇವೆ. ವರದಿ ಬಂದ ತಕ್ಷಣ ಹೊಸ ಕಟ್ಟಡ ನಿರ್ಮಿಸಿ ತಾವರಗೆರೆ ಹೊರ ಪೊಲೀಸ್ ಠಾಣೆಯನ್ನು ಸ್ಥಳಾಂತರ ಮಾಡುತ್ತೇವೆ'' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾಹಿತಿ ನೀಡಿದ್ದಾರೆ.
Post a comment
Log in to write reviews