ತೆಂಗಿನ ಗರಿಯಿಂದ ಬಸ್ ನಿಲ್ದಾಣ ನಿರ್ಮಿಸಿ ಸರ್ಕಾರಕ್ಕೆ ಚಾಟಿ ಬೀಸಿದ ಬಡ ಮಹಿಳೆಯರು
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಹತ್ತು ವರ್ಷದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಚತುಷ್ಪತ ಹೆದ್ದಾರಿ ಕಾಮಗಾರಿಯನ್ನು ಐ.ಆರ್.ಬಿ ಕಂಪನಿ ಮೂಲಕ ನೆಡೆಸುತ್ತಿದೆ. ಈ ವರೆಗೂ ಕಾಮಗಾರಿ ಪೂರ್ಣಗೊಳ್ಳದೇ ಜಮೀನು ಕಳೆದುಕೊಂಡವರು ಕೋರ್ಟ ಸುತ್ತುತ್ತಿದ್ದಾರೆ. ಇತ್ತ ಕಾಮಗಾರಿಗಾಗಿ ಚತುಷ್ಪತ ಹೆದ್ದಾರಿ ಹಾದು ಹೋಗುವ ಭಾಗದಲ್ಲಿ ಪ್ರಯಾಣಿಕರಿಗಾಗಿ ನಿರ್ಮಿಸಿದ್ದ ಬಸ್ ನಿಲ್ದಾಣ ಕೆಡವಿಹಾಕಿರುವ ಐ.ಆರ್.ಬಿ ಕಂಪನಿ (IRB company )ನಿಯಮದಂತೆ ಬಸ್ ನಿಲ್ದಾಣ ನಿರ್ಮಿಸಿಕೊಡಲು ಮೀನಾವೇಶ ತೋರುತ್ತಿದೆ.
ಇದರಿಂದಾಗಿ ಕರಾವಳಿ ಭಾಗದ ಹಲವು ಗ್ರಾಮದ ಜನ ಬಸ್ ನಿಲ್ದಾಣವಿಲ್ಲದೇ (Bus stop) ಹಿಡಿ ಶಾಪ ಹಾಕುವಂತಾಗಿದೆ.
ಹತ್ತು ವರ್ಷದಿಂದ ಜಿಲ್ಲಾಡಳಿತ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ( National Highway authority )ಅಂಕೋಲ ತಾಲೂಕಿನ ಹಾರವಾಡ (Haravada) ಜನತೆ ಕೆಡವಿದ ಬಸ್ ನಿಲ್ದಾಣವನ್ನು ನಿರ್ಮಿಸಿಕೊಡುವಂತೆ ಮನವಿಯ ಮೇಲೆ ಮನವಿ ನೀಡಿದರೂ ಬಸ್ ನಿಲ್ದಾಣ ಮಾತ್ರ ನಿರ್ಮಾಣ ಆಗಲಿಲ್ಲ.
ಇನ್ನು ಹೆದ್ದಾರಿಯಲ್ಲಿ ಪ್ರತಿ ದಿನ ಶಾಲಾ ಕಾಲೇಜು ಹಾಗೂ ಉದ್ಯೋಗಕ್ಕಾಗಿ ಅಂಕೋಲ,ಕಾರವಾರಕ್ಕೆ ಹೋಗುವ ಪ್ರಯಾಣಿಕರಿಗೆ ಹಾರವಾಡ ಕ್ರಾಸ್ ನಲ್ಲಿ ನಿಲ್ದಾಣ ಇರದ ಕಾರಣ ಬರುವ ಬಸ್ ಸಹ ನಿಲ್ಲಿಸುವುದಿಲ್ಲ. ಇದಲ್ಲದೇ ಪ್ರತಿ ದಿನ ಬಿಸಿಲ ಹೊಡತಕ್ಕೆ ನೆತ್ತಿ ಸುಟ್ಟು ಗಂಟೆಗಟ್ಟಲೇ ಕಾಯುವ ಮಹಿಳೆಯರು ಆಡಳಿತದ ನಿರ್ಲಕ್ಷಕ್ಕೆ ಬೇಸತ್ತು ತಮ್ಮ ಊರಿನಲ್ಲಿ ಸಿಗುವ ತೆಂಗಿನಗರಿಯನ್ನು ಒಟ್ಟುಮಾಡಿ ನಿಲ್ದಾಣ ನಿರ್ಮಿಸಿದ್ದಾರೆ. ಈ ನಿಲ್ದಾಣಕ್ಕೆ ತಾವೇ ಕೈನಿಂದ ಬರೆದ ಹಾರವಾಡ ಬಸ್ ನಿಲ್ದಾಣ ಎಂಬ ಬೋರ್ಡ್ ಸಹ ಹಾಕುವ ಮೂಲಕ ಆಡಳಿತ ಮಾಡಬೇಕಿದ್ದ ಕೆಲಸವನ್ನು ಈ ಊರಿನ ಬಡ ಮಹಿಳೆಯರು ಮಾಡಿ ತೋರಿಸಿದ್ದು ಆಡಳಿತವರ್ಗಕ್ಕೆ ಚಾಟಿ ಬೀಸಿದ್ದಾರೆ.
ಸದ್ಯ ಪ್ರಯಾಣಿಕರಿಗೆ ಬಿಸಿಲ ಹೊಡೆತಕ್ಕೆ ತೆಂಗಿನ ಗರಿಯ ನೆರಳೇನೋ ಸಿಕ್ಕಿದೆ. ಆದರೇ ಬರುವ ಮಳೆಯಲ್ಲಿ ಈ ತಾತ್ಕಾಲಿಕ ನಿಲ್ದಾಣ ಬಿದ್ದು ಹೋಗಲಿದ್ದು ಇನ್ನಾದರೂ ಆಡಳಿತ ವರ್ಗ ಈ ಬಗ್ಗೆ ಗಮನ ನೀಡಿ ನಿಯಮದಂತೆ ಬಸ್ ನಿಲ್ದಾಣ ನಿರ್ಮಿಸಿಬೇಕು ಎಂಬ ಒತ್ತಾಯ ಈ ಹಾರವಾಡ ಭಾಗದ ಜನರದ್ದಾಗಿದೆ.
Post a comment
Log in to write reviews