ಹಾಸನ: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ದೌರ್ಜನ್ಯ ಬೆಳಕಿಗೆ ಬರಲು ಕಾರಣವಾಗಿದ್ದ ಮಾಜಿ ಕಾರು ಚಾಲಕ ಕಾರ್ತಿಕ್‌ನನ್ನು ಎಸ್‌ಐಟಿ ಬಂಧಿಸಿದೆ.
ಕಾರ್ತಿಕ್ ಮತ್ತು ಐವರ ಮೇಲೆ ಏ. 23ರಂದು ಜೆಡಿಎಸ್ ಮುಖಂಡ, ವಕೀಲ ಪೂರ್ಣಚಂದ್ರ ತೇಜಸ್ವಿ ಪ್ರಕರಣ ದಾಖಲಿಸಿದ್ದರು. ಅನಂತರ ಆರೋಪಿಗಳು ಹಾಸನದ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಸಲ್ಲಿಸಿದ್ದ ಅರ್ಜಿ ವಜಾಗೊಂಡಿತ್ತು. ಬಳಿಕ ಹೈಕೋರ್ಟ್‌ನಲ್ಲಿ ಪ್ರಯತ್ನಿಸಿದ್ದರೂ ಜಾಮೀನು ಸಿಕ್ಕಿರಲಿಲ್ಲ.
ಹಾಸನ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಪ್ರಕಟವಾದ ಜೂ.4ರಂದು ಹಾಸನದಲ್ಲಿ ಕಾರ್ತಿಕ್ ಮತ್ತು ಶರತ್ ಪೊಲೀಸರ ಎದುರೇ ಸಂಭ್ರಮಾಚರಣೆ ಮಾಡಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಒಂದೂವರೆ ತಿಂಗಳಿನಿಂದ ಆರೋಪಿಗಳನ್ನು ಬಂಧಿಸದ ಎಸ್‌ಐಟಿ ಧೋರಣೆ ಬಗ್ಗೆ ಜೆಡಿಎಸ್ ಮುಖಂಡರು ಕಾನೂನು ಹೋರಾಟಕ್ಕೂ ಸಜ್ಜಾಗಿದ್ದ ಹೊತ್ತಿನಲ್ಲೇ ಕಾರ್ತಿಕ್‌ನನ್ನು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಗಡಿಭಾಗದಲ್ಲಿ ಬಂಧಿಸಲಾಗಿದೆ.
ಎಚ್.ಡಿ.ರೇವಣ್ಣ ಕುಟುಂಬದಲ್ಲಿ 15 ವರ್ಷ ಕಾರು ಚಾಲಕನಾಗಿದ್ದ ಕಾರ್ತಿಕ್, ಹೊಳೆನರಸೀಪುರ ಪಟ್ಟಣ ಸಮೀಪದ ಕಡವಿನ ಕೋಟೆ ಗ್ರಾಮದವನು. ಪ್ರಜ್ವಲ್ ಕಾರು ಚಾಲಕನಾಗಿಯೂ ಕೆಲಸ ಮಾಡುತ್ತಿದ್ದ. ಕಾರ್ತಿಕ್ ಮತ್ತು ರೇವಣ್ಣ ಕುಟುಂಬದ ನಡುವೆ ಜಮೀನು ಖರೀದಿ ಸಂಬಂಧ ಮನಸ್ತಾಪ ಉಂಟಾಗಿತ್ತು. ಆ ಹಿನ್ನೆಲೆಯಲ್ಲಿ ಪ್ರಜ್ವಲ್ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎನ್ನಲಾದ ಅಶ್ಲೀಲ ವೀಡಿಯೋಗಳನ್ನು ಕಾರ್ತಿಕ್ ಸಂಗ್ರಹಿಸಿಟ್ಟುಕೊಂಡು ಅನಂತರ ಅದನ್ನು ಬಹಿರಂಗ ಮಾಡಿದ್ದಾರೆ ಎನ್ನಲಾಗಿದೆ.
Post a comment
Log in to write reviews