ಚಿತ್ರದುರ್ಗ: ದಾವಣಗೆರೆ ನಗರದ ಅಪೂರ್ವ ರೆಸಾರ್ಟ್‌ನಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಸಿರಿಗೆರೆ ಮಠದ ಶ್ರೀಗಳ ಬದಲಾವಣೆ ಮಾಡಲು ಸಭೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಲು ನಿನ್ನೆಯೇ (ಆಗಸ್ಟ್ 5,2024) ಶ್ರೀಗಳು ಸಿರಿಗೆರೆ ಗ್ರಾಮದಲ್ಲಿರುವ ತರಳಬಾಳು ಜಗದ್ಗುರು ಬೃಹನ್ಮಠದಲ್ಲಿ ಭಕ್ತರೊಂದಿಗೆ ಭಾನುವಾರ ಸಭೆ ನಡೆಸಿದವರಿಗೆ ಟಾಂಗ್ ನೀಡಿದ್ದಾರೆ. ಈ ಸಭೆಯಲ್ಲಿ ಶ್ರೀಗಳ ಭಕ್ತರಲ್ಲದೇ, ಜಿಲ್ಲಾ ಹಾಗೂ ತಾಲೂಕು ಅಧ್ಯಕ್ಷರು ಭಾಗಿಯಾಗಿದ್ದರು.
ಸಭೆಯಲ್ಲಿ ಶ್ರೀಗಳು, " ಮಠದ ಬಗ್ಗೆ ರೆಸಾರ್ಟ್‌ನಲ್ಲಿ ಸಭೆ ಕರೆಯುತ್ತಾರಾ?, ಶಾಮನೂರು ಅವರ ಸಭಾಂಗಣ ಇಲ್ಲವೇ?, ಭಾನುವಾರ ಸಭೆ ನಡೆಸಿದವರಿಗೆ ಇನ್ಮುಂದೆ ಖಾಸಗಿ ಭೇಟಿಗೆ ಇದೇ ತಿಂಗಳು 18ಕ್ಕೆ ಬೆಂಗಳೂರಲ್ಲಿ ಭೇಟಿ ಆಗಲು ಅವಕಾಶ ನೀಡಲ್ಲ. ಸಿರಿಗೆರೆಯಲ್ಲಿ ಮಠ ಇದೆ, ಮಠಕ್ಕೆ ಬನ್ನಿ. ಇದೇ ವೇದಿಕೆಯಲ್ಲಿ ಜನರ ಮಧ್ಯೆಯೆ ಮಾತನಾಡಲಿ ಎಂದು ಗರಂ ಆದರು. ಉತ್ತರಾಧಿಕಾರಿ ಆಯ್ಕೆಗೆ ಸಮಿತಿ ಮಾಡದಂತೆ ಕೇಸ್ ಹಾಕಿದ್ದೀರಿ. ಆದರೆ ಸಭೆಯಲ್ಲಿ ಉತ್ತರಾಧಿಕಾರಿ ಆಯ್ಕೆ ಬಗ್ಗೆ ಆಗ್ರಹಿಸಿದವರು ಅವರೇ. ನಾವೇನು ಜನರ ಮತ ಪಡೆದು ಗುರುಗಳಾಗಿಲ್ಲ, ಜನರ ಭಕ್ತಿ ಭಾವದಿಂದ ನಾವು ಗುರುಗಳಾಗಿದ್ದೇವೆ. ಅಧಿಕಾರ ಕಳೆದುಕೊಂಡರೆ ನೀವು ಮಾಜಿ ಆಗುತ್ತೀರಿ, ನಾವು ಆಗಲ್ಲ ಎಂದು ಶ್ರೀಗಳು ಟಕ್ಕರ್ ನೀಡಿದ್ದಾರೆ.
ರೆಸಾರ್ಟ್ ರಾಜಕೀಯ ಕೀಳು ಅಭಿರುಚಿ: ಇನ್ಮುಂದೆ ಶಾಮನೂರು, ಬಿ.ಸಿ. ಪಾಟೀಲ್, ರಾಜಣ್ಣಗೆ ಅವರಿಗೆ ಖಾಸಗಿ ಭೇಟಿಗೆ ನಾವು ಅವಕಾಶ ಕೊಡಲ್ಲ. ನಾವು ಕರೆಯುವುದು ಇಲ್ಲ. ತಾಕತ್ತಿದ್ದರೆ ಇಲ್ಲಿಗೆ ಬರಲಿ. ಇವರು ಯಾರೂ ನಮ್ಮ ಪಟ್ಟಾಭಿಷೇಕಕ್ಕೆ ಬಿಡಿಗಾಸು ಕೊಟ್ಟಿಲ್ಲ. ಎಲುಬಿಲ್ಲದ ನಾಲಿಗೆ ಹೀಗೆ ಮಾತಾಡಿದರೆ ಏನರ್ಥ. ನಮ್ಮ ಮೇಲೆ ದೂರುಗಳಿದ್ದರೆ ಸಮಾಜದ ಅಧ್ಯಕ್ಷರಿಗೆ ದೂರು ಸಲ್ಲಿಸಿ. ಬಿ.ಸಿ ಪಾಟೀಲ್ ಮಂತ್ರಿ ಆಗೋಕೆ ಮುಂಚೆ ಇಲ್ಲಿಗೆ ಬಂದಿದ್ದರು. ಗುರುಗಳ ಆಶೀರ್ವಾದದಿಂದ ಮಂತ್ರಿ ಆಗಿದ್ದೇನೆ ಎಂದಿದ್ದರು. ಆದರೆ ಈಗ ಏಕೆ ಹೀಗೆ ಹೇಳಿದ್ದಾರೆ.
ಮಠದಲ್ಲಿ ರೌಡಿ, ಗುಂಡಾಗಳನ್ನು ಸಾಕಿದ್ದೇವೆ ಎಂದು ಹೇಳಿದ್ದಾರೆ. ಹಾಗಿದ್ದಲ್ಲಿ ಚಿತ್ರದುರ್ಗ, ದಾವಣಗೆರೆ ಎಸ್ಪಿ ಅವರನ್ನು ಕರೆದುಕೊಂಡು ಬನ್ನಿ. ಬಂಧಿಸಿ ಕರೆದೊಯ್ಯಲು ನಮ್ಮ ಅನುಮತಿ ಇದೆ. ರೆಸಾರ್ಟ್‌ನಲ್ಲಿ ಕುಳಿತು ಸಭೆ ಮಾಡಿದರೆ ಕುಡುಕರು ಪಾದಯಾತ್ರೆಗೆ ಬರುತ್ತಾರೆ. ಮಠದ ಇತಿಹಾಸದಲ್ಲಿ ಇದೊಂದು ಕಪ್ಪು ಚುಕ್ಕೆ. ಸಿರಿಗೆರೆ ಮಠ ಪವಿತ್ರವಾದದ್ದು. ನಾವು ಹಾಲು ಕುಡಿದುಕೊಂಡು ಇದ್ದೇವೆ, ಆಲ್ಕೊಹಾಲ್ ಅಲ್ಲ ಎಂದು ಸಿರಿಗೆರೆ ಶ್ರೀಗಳು ಕಿಡಿಕಾರಿದ್ದಾರೆ.
Post a comment
Log in to write reviews