ಬೆಂಗಳೂರು: ಪಿಎಸ್‌ಐ ಪರಶುರಾಮ ಸಾವು ಪ್ರಕರಣದಲ್ಲಿ (PSI Parashuram Case) ಎಫ್‌ಐಆರ್ ದಾಖಲಾದ ಬಳಿಕ ಎಲ್ಲೂ ಕಾಣಿಸಿಕೊಳ್ಳದ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ಮೊದಲ ಬಾರಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಕರಣ ದಾಖಲಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ಶಾಸಕ, ಇದೀಗ ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ನಾನು ಯಾವ ಪೊಲೀಸ್ ಬಳಿಯೂ ದುಡ್ಡು ಕೇಳಿಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಸಿರುವ ಯಾದಗಿರಿ ಶಾಸಕ, ನನ್ನ ವಿರುದ್ಧದ ಆರೋಪಗಳು ಸತ್ಯಕ್ಕೆ ದೂರವಾಗಿವೆ. ನಾನು ಯಾವ ಪೊಲೀಸ್‌ಗೂ ದುಡ್ಡು ಕೇಳಿಲ್ಲ. ದುಡ್ಡಿನ ಬಗ್ಗೆ ಮಾತಾಡಿಲ್ಲ, ಕ್ಷೇತ್ರದ ಕುಂದು ಕೊರತೆಗಳ ಬಗ್ಗೆ ಮಾತಾಡಿದ್ದೇನೆ. ಬೇರೆ ಯಾವ ವಿಷಯವೂ ನಾನು ಮಾತಾಡಿಲ್ಲ. ಪ್ರಕರಣವನ್ನು ನಮ್ಮ ಸರ್ಕಾರ ಸಿಐಡಿಗೆ ವಹಿಸಿದೆ. ತನಿಖಾ ವರದಿ ಬಂದ ಮೇಲೆ ನಾನು ಸೇರಿ ಸತ್ಯಾಂಶ ತಿಳಿಯುತ್ತದೆ ಎಂದು ಹೇಳಿದ್ದಾರೆ.
ಎಫ್ಐಆರ್ ದಾಖಲಾಗಲು ವಿಳಂಬದ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಅದು ಪೊಲೀಸರಿಗೆ ಬಿಟ್ಟಿದ್ದು, ಅದರಲ್ಲಿ ನಾನು ಭಾಗಿಯಾಗಿಲ್ಲ, ಆ ಕುರಿತು ಯಾರ ಜೊತೆಗೆ ಮಾತನಾಡಿಲ್ಲ. ತಂದೆ ಜತೆ ಮಗ ಇದ್ದೆ ಇರುತ್ತಾನೆ, ಆದರೂ ಸುಮ್ಮನೆ ಆ ಹುಡುಗನ ಮೇಲೆ ಜನ ಆಪಾದನೆ ಮಾಡುತ್ತಾರೆ ಎಂದರೆ ನಾನು ಒಪ್ಪುವುದಿಲ್ಲ. ಇದು ಸುಳ್ಳು, ಕಟ್ಟು ಕಥೆ, ಇದೊಂದು ಷಡ್ಯಂತ್ರ. ತಂದೆ ಮಕ್ಕಳನ್ನು ಸಿಕ್ಕಿ ಹಾಕಿಸಲು ವಿಪಕ್ಷದವರು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿಐಡಿ ವರದಿ ಬಂದ ಮೇಲೆ ಇದು ಷಡ್ಯಂತ್ರವೋ, ಅಲ್ಲವೋ ಎಂಬುವುದು ಹೊರಗಡೆ ಬರಲಿದೆ. ಕಾನೂನಿಗೆ ನಾನು ತಲೆ ಬಾಗುತ್ತೇನೆ, ಸಿಐಡಿ ಅವರು ಕರೆ ಮಾಡಿದ ತಕ್ಷಣ ಹೋಗಿ ವಿಚಾರಣೆಗೆ ಸಹಕಾರ ಕೊಡುತ್ತೇನೆ. ಸಿಎಂ ಅವರು ನಮ್ಮ ನಾಯಕರು, ಪಕ್ಷದ ಸಭೆಗೆ ಬರಲು ಹೇಳಿದ್ದರು. ಅದಕ್ಕೆ ಹೋಗಿದ್ದೆ. ಚನ್ನಾರೆಡ್ಡಿ ಧೈರ್ಯವಾಗಿ ಇರು, ನಾವೆಲ್ಲ ಇದ್ದೇವೆ ಎಂದು ಹೇಳಿರುವುದಾಗಿ ತಿಳಿಸಿದರು.
ಸಿಎಂಗೆ ನಾನು ಯಾವ ವಿಚಾರವೂ ತಿಳಿಸಲು ಹೋಗಿಲ್ಲ. ಅವರಿಗೆ ಗುಪ್ತಚರ ಇಲಾಖೆಯಿಂದ ಮಾಹಿತಿ ಹೋಗಿರುತ್ತದೆ. ಗೃಹ ಸಚಿವರು ಸೇರಿ ಎಲ್ಲಾ ಸಚಿವರು ನನ್ನ ಜೊತೆ ಮಾತನಾಡಿದ್ದಾರೆ ಎಂದು ತಿಳಿಸಿದರು.
Post a comment
Log in to write reviews