ದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನೀಟ್- ಯುಜಿ ಅಕ್ರಮ ಆರೋಪ ಕುರಿತು ಸಿಬಿಐ ಮನವಿ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಎನ್‌ಟಿಎಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೇ ಎರಡು ವಾರಗಳಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಮತ್ತು ಎನ್‌ಟಿಎಗೆ ಸುಪ್ರೀಂ ಕೋರ್ಟ್ ಹೇಳಿದೆ.
ವಿಚಾರಣೆಯ ಸಂದರ್ಭದಲ್ಲಿ ವಕೀಲರಾದ ಕನು ಅಗರ್ವಾಲ್ ಅವರು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠಕ್ಕೆ ಎನ್‌ಟಿಎ ಜೂನ್ 4 ರಂದು ಗ್ರೇಸ್ ಮಾರ್ಕ್ ನಿರ್ಧಾರವನ್ನು ಹಿಂಪಡೆದಿದ್ದು, ಜೂನ್ 23 ರಂದು ಮರು ಪರೀಕ್ಷೆಯನ್ನು ನಡೆಸಲಿದೆ. ಮರು ಪರೀಕ್ಷೆಯ ಫಲಿತಾಂಶವನ್ನು ಜೂನ್ 30 ರಂದು ಪ್ರಕಟಿಸಲಾಗುವುದು, ಜುಲೈ 6 ರಂದು ಪ್ರಾರಂಭವಾಗುವ ಕೌನ್ಸೆಲಿಂಗ್ ಪ್ರಕ್ರಿಯೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ಏನಿದು ವಿವಾದ..?
ನೀಟ್ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಅಂಕಪಟ್ಟಿಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ವಿವಾದ ಪ್ರಾರಂಭವಾಯಿತು. ಈ ಚಿತ್ರಗಳನ್ನು ಪೋಸ್ಟ್ ಮಾಡಿದ ಬಳಕೆದಾರರು ದಾಖಲೆಯ 67 ಅಭ್ಯರ್ಥಿಗಳು ಪರಿಪೂರ್ಣ ಅಂಕಗಳೊಂದಿಗೆ ಉನ್ನತ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ ಎಂದು ಗಮನಸೆಳೆದಿದ್ದಾರೆ. ಈ ಪೈಕಿ ಸುಮಾರು ಆರು ಅಭ್ಯರ್ಥಿಗಳು ಒಂದೇ ಕೇಂದ್ರದಿಂದ ಪರೀಕ್ಷೆ ಬರೆದಿದ್ದರು. ಹಲವಾರು ಅಭ್ಯರ್ಥಿಗಳಿಗೆ ಅಂಕಗಳನ್ನು ಕಡಿಮೆ ಮಾಡಲಾಗಿದೆ ಅಥವಾ ಹೆಚ್ಚಿಸಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಇದು ಅವರ ಶ್ರೇಣಿಗಳ ಮೇಲೆ ಪರಿಣಾಮ ಬೀರುತ್ತದೆ. ಇದರ ಜೊತೆಗೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೂಡ ಕೇಳಿ ಬಂದಿದೆ. ಮೇ 5 ರ ಪರೀಕ್ಷೆಯ ಮೊದಲು ಸುಮಾರು 35 ಆಕಾಂಕ್ಷಿಗಳಿಗೆ ನೀಟ್ ಯುಜಿ ಗಾಗಿ ಪ್ರಶ್ನೆ ಪತ್ರಿಕೆಗಳು ಮತ್ತು ಉತ್ತರಗಳನ್ನು ಒದಗಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಬಿಹಾರ ಪೊಲೀಸ್ ಆರ್ಥಿಕ ಅಪರಾಧಗಳ ಘಟಕ ಕಳೆದ ತಿಂಗಳು ಹೇಳಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 13 ಮಂದಿಯನ್ನು ಬಂಧಿಸಲಾಗಿದೆ. ಒಟ್ಟು 1,563 ವಿದ್ಯಾರ್ಥಿಗಳು ಗ್ರೇಸ್ ಅಂಕಗಳನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
Post a comment
Log in to write reviews