ಹೊಸದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಖರ್ಗೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಹರಿಯಾಣ ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, ಹರಿಯಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಉದಯ್ ಭಾನ್, ಹಿರಿಯ ನಾಯಕರಾದ ಅಜಯ್ ಮಾಕೆನ್, ಜೈರಾಮ್ ರಮೇಶ್, ಕೆಸಿ ವೇಣುಗೋಪಾಲ್, ಪವನ್ ಖೇರಾ, ಅಶೋಕ್ ಗೆಹ್ಲೋಟ್ ಮೊದಲಾದವರು ಚುನಾವಣೆ ಸೋಲಿನ ಕುರಿತು ಪರಾಮರ್ಶೆ ನಡೆಸಿದ್ದರು.
ಸ್ಥಳೀಯ ಅಭ್ಯರ್ಥಿಗಳು, ನಾಯಕರು, ಕಾರ್ಯಕರ್ತರು ನೀಡಿದ ಮಾಹಿತಿ ಆಧರಿಸಿ ಫಲಿತಾಂಶದ ಬಗ್ಗೆ ಪರಿಶೀಲನೆ ನಡೆಸಿದ ಕಾಂಗ್ರೆಸ್ ನಾಯಕರು, ವಿದ್ಯುನ್ಮಾನ ಮತಯಂತ್ರಗಳ ಬಗ್ಗೆ ನೀಡಿದ ದೂರಿನ ಕುರಿತು ಚರ್ಚಿಸಿದರು. 20ಕ್ಕೂ ಹೆಚ್ಚು ಇವಿಎಂಗಳ ಬಗ್ಗೆ ಬಂದ ದೂರು ಪರಿಶೀಲಿಸಿದ ನಾಯಕರು, ಸತ್ಯಾಸತ್ಯತೆ ಪತ್ತೆಗೆ ತಾಂತ್ರಿಕ ಸಮಿತಿ ರಚಿಸಲು ತೀರ್ಮಾನಿಸಿದರು.
ಸ್ಥಳೀಯ ನಾಯಕರ ಮೇಲೆ ಕಿಡಿ
ಮೂಲಗಳ ಪ್ರಕಾರ ಸಭೆಯಲ್ಲಿ ಹೆಚ್ಚು ಕಡಿಮೆ ಮೌನವಾಗಿಯೇ ರಾಹುಲ್ ಗಾಂಧಿ ಕುಳಿತಿದ್ದರು. ಆದರೆ ತಮ್ಮ ಸರದಿ ಬಂದಾಗ ಬಾಯಿ ಬಿಟ್ಟ ಕಾಂಗ್ರೆಸ್ ನಾಯಕ, 'ಇವಿಎಂ ಹಾಗೂ ಚುನಾವಣಾ ಅಯೋಗ ತುಂಬಾ ಉತ್ತರ ನೀಡಬೇಕಾಗಿದೆ. ಮತ ಎಣಿಕೆ ಸಂಬಂಧ ಏನು ಲೆಕ್ಕ ತಪ್ಪಿದೆ ಎಂಬುದರ ಬಗ್ಗೆ ನನಗೆ ವಿವರವಾದ ವರದಿ ಬೇಕು' ಎಂದು ಕೇಳಿದ್ದಾರೆ ಎನ್ನಲಾಗಿದೆ.
ನಂತರ, 'ಈ ಚುನಾವಣೆಯನ್ನು ನಾವು ಗೆಲ್ಲಬಹುದಾಗಿತ್ತು. ಆದರೆ ಸ್ಥಳೀಯ ನಾಯಕರಿಗೆ ಪಕ್ಷಕ್ಕಿಂತ ತಮ್ಮ ಹಿತವೇ ಹೆಚ್ಚಾಯಿತು,' ಎಂದು ದೂರಿದ್ದಾರೆ. ಈ ವೇಳೆ ಹೆಚ್ಚಿನವರು ಇವಿಎಂನ್ನು ದೂರಿದಾಗ, 'ನನಗೆ ಇದರ ಬಗ್ಗೆ ವಿವರವಾದ ವರದಿ ಬೇಕು' ಎಂದಿದ್ದಾರೆ.
ಮುಂದುವರಿದು, 'ಸ್ಥಳೀಯ ನಾಯಕರು ತಮ್ಮ ತಮ್ಮಲ್ಲೇ ಜಗಳವಾಡಿಕೊಂಡಿದ್ದರು. ಪಕ್ಷದ ಬಗ್ಗೆ ಚಿಂತೆಯೇ ಮಾಡಲಿಲ್ಲ' ಎಂದು ಹೇಳಿ ಎದ್ದು ನಿಂತು ಸಭೆಯಿಂದ ಅರ್ಧಲ್ಲೇ ಹೊರಟೇ ಬಿಟ್ಟರು ಎಂದು ಮೂಲಗಳು ಹೇಳಿದ್ದಾಗಿ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
Post a comment
Log in to write reviews