ಬೆಂಗಳೂರು: ನಗರದಲ್ಲಿ ಬೆಳ್ಳಂ ಬೆಳಗ್ಗೆ ಭಾರೀ ಮಳೆಯಾಗಿದ್ದು, ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದರು. ರಸ್ತೆಯಲ್ಲಿ ನೀರು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಆಗಿದ್ದು, ಸಂಚಾರ ನಿಧಾನಗತಿಯಿಂದ ಕೂಡಿತ್ತು. ಮಧ್ಯರಾತ್ರಿಯಿಂದ ನಸುಕಿನ ಜಾವದವರೆಗೆ ಆರ್ಭಟಿಸಿದ್ದ ವರುಣಾರ್ಭಟ ಈಗ ಕೊಂಚ ಶಾಂತವಾಗಿದ್ದಾನೆ. ನಸುಕಿನಜಾವ ಸುರಿದ ಭಾರೀ ಮಳೆಗೆ ನಗರದ ರಸ್ತೆಗಳಲ್ಲಿ ಮೊಣಕಾಲಿನವರೆಗೂ ನೀರು ನಿಂತಿದ್ದು, ಇದರಿಂದ ಕಚೇರಿಗಳಿಗೆ ತೆರಳುತ್ತಿದ್ದವರು ಪರದಾಡುವಂತಾಯಿತು.
ಪಾಣತ್ತೂರು ರೈಲ್ವೇ ಅಂಡರ್ಪಾಸ್ನಲ್ಲಿ ಮಳೆ ನೀರು ನಿಂತಿರುವುದರಿಂದ ವಾಹನ ಸವಾರರು ಪರದಾಡುವಂತಹ ಪರಿಸ್ಥಿತಿ ಎದುರಾಗಿತ್ತು. ಹೀಗಾಗಿ ಸವಾರರು ಪರ್ಯಾಯ ರಸ್ತೆಗಳನ್ನು ಬಳಸಬೇಕೆಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ
ಮಡಿವಾಳ ಪೊಲೀಸ್ ಠಾಣೆ, ಎಂಸಿಎಚ್‌ಎಸ್ ಕಾಲೋನಿ, ಸ್ಯಾಂಕಿ ರಸ್ತೆ, ಹಳೆ ಹೈಗ್ರೌಂಡ್, ಸೆವೆನ್ ಮಿನಿಸ್ಟರ್ಸ್ ಕ್ವಾರ್ಟರ್, ಕಾವೇರಪ್ಪ ಬಡಾವಣೆ, ವಸಂತನಗರ, ಮಿಲ್ಲರ್ಸ್ ರಸ್ತೆ, ರಾಮಕೃಷ್ಣನಗರ, ಗಂಗಾನಗರ, ಕೆಆರ್ ಸರ್ಕಲ್ ಅಂಡರ್ ಪಾಸ್ಗಳಲ್ಲಿ ನೀರು ನಿಂತಿದೆ. ಹೀಗಾಗಿ ವಾಹನ ಸಂಚಾರ ನಿಧಾನಗತಿಯಿಂದ ಕೂಡಿದೆ.
ವಡ್ಡರಪಾಳ್ಯ ಜಂಕ್ಷನ್‌ನಲ್ಲಿ ನೀರು ನಿಂತಿರುವುದರಿಂದ, ವಿಮಾನ ನಿಲ್ದಾಣದ ಕಡೆಗೆ ನಿಧಾನಗತಿಯ ಸಂಚಾರವಿರುತ್ತದೆ ದಯಮಾಡಿ ಸಹಕರಿಸಿ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ.
ಕೊಡೆ ಜಂಕ್ಷನ್, ವಿಂಡ್ಸರ್ ಮ್ಯಾನರ್ ರೈಲ್ವೆ ಸೇತುವೆ, ಸ್ಯಾಂಕಿ ರಸ್ತೆ, ಪಿಜಿ ಹಳ್ಳಿ ಮಿಲ್ಲರ್ಸ್ ರಸ್ತೆ ಕೆಳಸೇತುವೆಯಲ್ಲಿ ನೀರು ನಿಂತಿರುವುದರಿಂದ ನಿಧಾನಗತಿಯ ಸಂಚಾರವಿದೆ ಎಂದು ಬೆಂಗಳೂರು ನಗರ ಸಂಚಾರಿ ಪೊಲೀಸರು ತಿಳಿಸಿದ್ದಾರೆ. ಯಾವುದೇ ತುರ್ತು ಸಮಯದಲ್ಲಿ ತಕ್ಷಣದ ಸಹಾಯಕ್ಕಾಗಿ 112ಗೆ ಕರೆ ಮಾಡಿ ಎಂದು ಮನವಿ ಮಾಡಿದ್ದಾರೆ.
Post a comment
Log in to write reviews