ಬೆಂಗಳೂರು: ರಾಜ್ಯದ ಕರಾವಳಿಯ 6 ಜಿಲ್ಲೆಗಳಲ್ಲಿ ಗಾಳಿ ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಹೆಚ್ಚು ಸುರಿಯಲಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕಲಬುರಗಿ, ಬೀದರ್, ಬೆಳಗಾವಿ, ಬಾಗಲಕೋಟೆ, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ವಾರ್ನಿಂಗ್ ನೀಡಲಾಗಿದೆ.
ಕೆಲ ದಿನಗಳಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೆಚ್ಚಿನ ಪ್ರದೇಶಗಳಲ್ಲಿ ಮಳೆ ಬೀಳುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಕ್ಯಾಸಲ್‌ರಾಕ್‌ನಲ್ಲಿ ನಿನ್ನೆ ಅತ್ಯಧಿಕ 160 ಮಿ.ಮೀ. ಪ್ರಮಾಣದ ಮಳೆಯಾಗಿದ್ದು, ಕೊಟ್ಟಿಗೆಹಾರದಲ್ಲಿ 110, ಪುತ್ತೂರಿನಲ್ಲಿ 100, ಭಾಗಮಂಡಲ ಹಾಗೂ ತಲಾ 80, ಶಿರಾಲಿಯಲ್ಲಿ 60, ಧರ್ಮಸ್ಥಳ, ಬೆಳ್ತಂಗಡಿ, ಶೃಂಗೇರಿ ಹಾಗೂ ಪೊನ್ನಂಪೇಟೆಯಲ್ಲಿ ತಲಾ 50 ಮಿ.ಮೀ. ಮಳೆ ದಾಖಲಾಗಿದೆ.
ರಾಜ್ಯದ ಪಶ್ಚಿಮಘಟ್ಟ ಪ್ರದೇಶ ಸೇರಿ ಕರಾವಳಿಯ ಜಿಲ್ಲೆಗಳಲ್ಲಿ ಈ ವಾರಾಂತ್ಯದವರೆಗೂ ಭಾರಿ ಮಳೆಯಾಗಲಿದೆ. ಇದೇ ವೇಳೆ ಕರಾವಳಿ ತೀರದುದ್ದಕ್ಕೂ ಗಾಳಿಯು ಗಂಟೆಗೆ 35ರಿಂದ 45 ಕಿ.ಮೀ. ವೇಗದಲ್ಲಿ ಬೀಸಲಿದ್ದು, ಕೆಲವೆಡೆ 55 ಕಿ.ಮೀ. ವೇಗವನ್ನೂ ತಲುಪಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆ ಸಾಧ್ಯತೆ ಇದೆ. ನಗರದಲ್ಲಿ 28.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಹೆಚ್ಎಎಲ್ನಲ್ಲಿ 29.1 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 30.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Post a comment
Log in to write reviews