ದೇಶ ಸದೃಢಗೊಳಿಸಲು ಯುವಕರಿಗೆ ರಾಮೋಜಿ ರಾವ್ ಬದುಕು ಸ್ಫೂರ್ತಿ: ಎಂ. ವೆಂಕಯ್ಯ ನಾಯ್ಡು
ಹೈದರಾಬಾದ್: ರಾಮೋಜಿ ಗ್ರೂಪ್ ಅಧ್ಯಕ್ಷ ದಿವಂಗತ ರಾಮೋಜಿ ರಾವ್ ಅವರಿಂದ ಸ್ಫೂರ್ತಿ ಪಡೆದು ದೇಶವನ್ನು ಬಲಿಷ್ಠಗೊಳಿಸಲು ಯುವಕರು ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು ಎಂದು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಕರೆ ನೀಡಿದರು.
ಬುಧವಾರ (ಜುಲೈ 17) ಸಿಕಂದರಾಬಾದ್‌ನ ಇಂಪೀರಿಯಲ್ ಗಾರ್ಡನ್‌ನಲ್ಲಿ ಬ್ರಹ್ಮಕುಮಾರೀಸ್ ಆಶ್ರಯದಲ್ಲಿ ಆಯೋಜಿಸಿದ್ದ ರಾಮೋಜಿ ರಾವ್ ಪುಣ್ಯಸ್ಮರಣೆಯಲ್ಲಿ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ''ರಾಮೋಜಿ ರಾವ್ ಅವರಿಗೆ ಸಮಾಜದ ಮೇಲೆ, ಅದರಲ್ಲೂ ಗ್ರಾಮೀಣ ಜನರು ಮತ್ತು ರೈತರ ಮೇಲೆ ಅಪಾರ ಪ್ರೀತಿ ಇತ್ತು. ಅವರು ಯಾವಾಗಲೂ ಜನಜೀವನದ ಮೇಲೆ ಬೆಳಕು ಚೆಲ್ಲಲು ಬಯಸುತ್ತಿದ್ದರು. ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಮೌಲ್ಯಗಳನ್ನು ಅನುಸರಿಸಿದ್ದರು. ಅವರ ಬಗ್ಗೆ ಇಂದಿನ ಪೀಳಿಗೆಗೆ ಮಾಹಿತಿ ನೀಡಬೇಕು. ಅನೇಕರು ರಾಮೋಜಿ ರಾವ್ ಅವರೊಂದಿಗಿನ ಒಡನಾಟ ಮತ್ತು ಅವರು ಕಲಿತ ವಿಷಯಗಳನ್ನು ವಿವಿಧ ವೇದಿಕೆಗಳಲ್ಲಿ ಹಂಚಿಕೊಳ್ಳಬೇಕು'' ಎಂದು ನಾಯ್ಡು ಹೇಳಿದರು.
''ರಾಮೋಜಿ ಅವರೊಂದಿಗಿನ ಒಡನಾಟದ ವಿಷಯಗಳನ್ನೆಲ್ಲ ಸಂಗ್ರಹಿಸಿ ಒಳ್ಳೆಯ ಪುಸ್ತಕಗಳನ್ನು ಹೊರತರಬೇಕು. ಮಹಾನ್ ವ್ಯಕ್ತಿಗಳು, ಸಮಾಜದ ಮೇಲೆ ಅವರು ಬೀರಿದ ಸಕಾರಾತ್ಮಕ ಪರಿಣಾಮಗಳೆಲ್ಲವೂ ಇತಿಹಾಸದಲ್ಲಿ ದಾಖಲಾಗಬೇಕು. ಅವರ ಪರಿಶ್ರಮ, ಸಮಾಜದ ಮೇಲಿನ ಪ್ರೀತಿ, ಜನರ ಪರವಾಗಿ ನಿಲ್ಲುವ ಹಂಬಲವನ್ನು ಯುವಕರು ಸ್ಪೂರ್ತಿಯಾಗಿ ಸ್ವೀಕರಿಸಬೇಕು. ಯುವಕರು ಉನ್ನತ ಸ್ಥಾನಕ್ಕೇರಿ, ಸಮಾಜವನ್ನು ಜಾಗೃತಗೊಳಿಸುವ ಮೂಲಕ ದೇಶವನ್ನು ಬಲಿಷ್ಠಗೊಳಿಸಲು ಇದು ಸಹಾಯವಾಗುತ್ತದೆ'' ಎಂದು ಸಲಹೆ ನೀಡಿದರು.
ಮುಂದುವರೆದು ಮಾತನಾಡುತ್ತಾ, ''ರಾಮೋಜಿ ರಾವ್ ಯಾವುದೇ ವಿಷಯವನ್ನಾದರೂ ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದರು. ಸಾಮಾನ್ಯ ಕುಟುಂಬದಿಂದ ಬಂದಿದ್ದರೂ ಆತ್ಮವಿಶ್ವಾಸವನ್ನೇ ಬಂಡವಾಳವನ್ನಾಗಿಸಿ ಬದುಕಿನ ಪ್ರಯಾಣ ಪ್ರಾರಂಭಿಸಿದ್ದರು. ಅತ್ಯಂತ ಶಕ್ತಿಶಾಲಿ ಮತ್ತು ನುರಿತ ಸಾಹಸಿಯಾಗಿ ಬೆಳೆದರು'' ಎಂದು ಸ್ಮರಿಸಿದರು.
Post a comment
Log in to write reviews