ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ಉತ್ಸವಕ್ಕೆ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಅಕ್ಟೋಬರ್ 3 ರಂದು ಮೈಸೂರು ದಸರಾ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಆದರೆ, ಇದರ ನಡುವೆ ಮೈಸೂರು ಹೊರವಲಯದಲ್ಲಿ ರೇವ್ ಪಾರ್ಟಿ ನಡೆದಿದೆ ಎಂದು ಆರೋಪ ಕೇಳಿ ಬಂದಿದೆ. ಇನ್ನೂ ಈ ವೇಳೆ ಕೂಡಲೆ ಕಾರ್ಯ ಪ್ರವೃತ್ತರಾದ ಹೆಚ್ಚುವರಿ ಎಸ್ಪಿ ನಾಗೇಶ್ ಹಾಗೂ ಡಿವೈಎಸ್ಪಿ ಕರೀಂ ತಮ್ಮ ತಂಡದ ಸಮೇತ ಪಾರ್ಟಿ ನಡೆಯುತ್ತಿದ್ದ ಸ್ಥಳದ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಕೆಲವರು ತಪ್ಪಿಸಿಕೊಳ್ಳಲು ಪೊಲೀಸರ ಮೇಲೆಯೇ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಪಾರ್ಟಿಯಲ್ಲಿದ್ದ 50ಕ್ಕೂ ಹೆಚ್ಚು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಎಫ್ಎಸ್ಎಲ್ ತಂಡ ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದೆ. ಪಾರ್ಟಿಯಲ್ಲಿ 150ಕ್ಕೂ ಹೆಚ್ಚು ಯುವಕ, ಯುವತಿಯರು ಭಾಗಿಯಾಗಿದ್ದರು ಎಂಬ ಮಾಹಿತಿ ದೊರೆತಿದೆ. ಅಲ್ಲದೇ, ಪಾರ್ಟಿಗೆ ಇಸ್ರೇಲ್ನಿಂದ ರ್ಯಾಪರ್ ಗ್ರೇನ್ ರಿಪ್ಪರ್ ಬಂದಿದ್ದನು ಎನ್ನಲಾಗಿದೆ. ಆಯೋಜಕರು ಪಾರ್ಟಿಗೆ ಒಬ್ಬರಿಗೆ 2 ಸಾವಿರ ರೂ. ನಿಗದಿ ಮಾಡಿದ್ದರು. ಇದಕ್ಕೆ ಸಂಬಂಧಿಸಿದಂತೆ ಎಸ್ಪಿ ವಿಷ್ಣುವರ್ಧನ್ ಮಾತನಾಡಿ, ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಆದರೆ ಸ್ಥಳದಲ್ಲಿ ಮದ್ಯ ಹಾಗೂ ಸಿಗರೇಟ್ ದೊರೆತಿದೆ. ಎಫ್ಎಸ್ಎಲ್ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು.
Post a comment
Log in to write reviews