ಭಾರತ
ಜನರ ಹಿತಕ್ಕಾಗಿ ಸಿಎಂ ಸ್ಥಾನದಿಂದ ಕೆಳಗಿಳಿಯಲು ಸಿದ್ಧ: ಪಶ್ಚಿಮ ಬಂಗಾಳ ಸಿಎಂ ಮಮತಾ
ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರವರು "ಜನರ ಹಿತಕ್ಕಾಗಿ ನಾನು ಸಿಎಂ ಸ್ಥಾನದಿಂದ ಕೆಳಗಿಳಿಯಲು ಸಿದ್ಧ. ಆದರೆ ಸಂತ್ರಸ್ತೆಗೆ ನ್ಯಾಯ ಸಿಗಬೇಕು" ಎಂದು ತಿಳಿಸಿದರು ಎನ್ನಲಾಗಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಆರ್.ಜೆ.ಕರ್ ಬಿಕ್ಕಟ್ಟು ಇಂದು ಅಂತ್ಯವಾಗಲಿದೆ ಎಂದು ನಿರೀಕ್ಷಿಸಿದ್ದ ಬಂಗಾಳದ ಜನರಲ್ಲಿ ಕ್ಷಮೆ ಕೋರುತ್ತೇನೆ. ಕಿರಿಯ ವೈದ್ಯರು ಸಭೆಗೆ ಬರಲಿಲ್ಲ. ಅವರೆಲ್ಲರೂ ಮತ್ತೆ ಸೇವೆಗೆ ಮರಳುವಂತೆ ಮನವಿ ಮಾಡುತ್ತೇನೆ" ಎಂದರು.
" ನನ್ನ ಸದುದ್ದೇಶ ಮತ್ತು ಪ್ರಯತ್ನಗಳ ಮಧ್ಯೆಯೂ ಕಳೆದ ಮೂರು ದಿನಗಳಿಂದ ಕಿರಿಯ ವೈದ್ಯರು ಮಾತುಕತೆ ನಡೆಸಲು ನಿರಾಕರಿಸಿದ್ದಾರೆ. ನಾನು ರಾಜ್ಯದ ಜನರ ಹಿತದೃಷ್ಟಿಯಿಂದ ರಾಜೀನಾಮೆ ನೀಡಲು ಸಿದ್ಧನಿದ್ದೇನೆ. ಕಿರಿಯ ವೈದ್ಯರು ಸೇವೆ ನಿಲ್ಲಿಸಿದ್ದರಿಂದ 27 ರೋಗಿಗಳು ಸಾವನ್ನಪ್ಪಿದ್ದಾರೆ ಮತ್ತು ಸುಮಾರು ಏಳು ಲಕ್ಷ ಜನರ ಮೇಲೆ ಪರಿಣಾಮ ಬೀರುತ್ತಿದೆ. ಸಂತ್ರಸ್ತರಿಗೆ ನ್ಯಾಯ ಸಿಗಬೇಕು. ಆದರೆ ಸುಪ್ರೀಂ ಕೋರ್ಟ್ ತೀರ್ಪಿನಂತೆ ವೈದ್ಯರು ಮತ್ತೆ ಕೆಲಸಕ್ಕೆ ಸೇರಿಕೊಳ್ಳಬೇಕು" ಎಂದು ಮನವಿ ಮಾಡಿದರು.
"ನಾವು ಧರಣಿ ನಿರತ ವೈದ್ಯರ ವಿರುದ್ಧವಾಗಿ ಹೋಗುತ್ತಿಲ್ಲ. ಕಿರಿಯ ವೈದ್ಯರಿಗಿಂತ ದೊಡ್ಡವಳೆಂಬ ಕಾರಣಕ್ಕೆ ಅವರನ್ನು ಕ್ಷಮಿಸಿದ್ದೇನೆ. ಸಭೆಗೆ ಬಾರದೇ ಕಾಯಿಸಿದ ವೈದ್ಯರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಏಕೆಂದರೆ ಹಿರಿಯರಾಗಿ, ಕಿರಿಯರನ್ನು ಕ್ಷಮಿಸುವುದು ನಮ್ಮ ಜವಾಬ್ದಾರಿ" ಎಂದರು.
"ವೈದ್ಯರು ಬರುತ್ತಾರೆ ಎಂದು ನಾನು ಮೂರು ದಿನಗಳಿಂದ ಕಾಯುತ್ತಿದ್ದೆ. ಆದರೆ ಅವರು ಬರಲಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲಂಘಿಸಿದ್ದಾರೆ. ಮತ್ತೆ ಕೆಲಸಕ್ಕೆ ಸೇರಿಲ್ಲ. ಆದರೆ ನಾವು ಯಾವುದೇ ಕ್ರಮ ಕೈಗೊಂಡಿಲ್ಲ. ಏಕೆಂದರೆ ಕೆಲ ಸಂದರ್ಭಗಳನ್ನು ತಾಳ್ಮೆಯಿಂದ ಎದುರಿಸಬೇಕಾಗುತ್ತದೆ. ಚರ್ಚೆಗಳ ಮೂಲಕವೇ ಪರಿಹಾರಗಳನ್ನು ತಲುಪಲು ಸಾಧ್ಯವಾದ್ದರಿಂದ ಮುಕ್ತ ಮನಸ್ಸಿನಿಂದ ಚರ್ಚೆ ನಡೆಸಬೇಕಿದೆ" ಎಂದು ಮಮತಾ ಅಭಿಪ್ರಾಯಪಟ್ಟರು.
ಆಗಸ್ಟ್ 9ರಂದು ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಮಹಿಳಾ ಟ್ರೈನಿ ವೈದ್ಯೆಯ ಶವ ಪತ್ತೆಯಾದ ಕೆಲವೇ ಗಂಟೆಗಳ ನಂತರ ಕಿರಿಯ ವೈದ್ಯರು ತಮ್ಮ ಮುಷ್ಕರ ಪ್ರಾರಂಭಿಸಿದ್ದರು. ಅಂದಿನಿಂದ, ಪ್ರತಿಭಟನೆ ಉಲ್ಬಣಗೊಂಡಿದೆ. ಇದರಿಂದ ಪಶ್ಚಿಮ ಬಂಗಾಳದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಗಳು ಸ್ಥಗಿತಗೊಂಡಿವೆ.
Post a comment
Log in to write reviews