ಬೆಂಗಳೂರು:ಮುಡಾ ಹಗರಣದ ಪ್ರಾಸಿಕ್ಯೂಷನ್ಗೆ ಅನುಮತಿ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ಕರ್ನಾಟಕ ಹೈಕೋರ್ಟ್ ಮತ್ತೆ ಮುಂದೂಡಿದೆ. ಇಂದು(ಸೆ.09) ವಾದ ಪ್ರತಿವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 12ಕ್ಕೆ ಮುಂದೂಡಿದರು. ಇನ್ನು ಸೆ.12ರಂದು ಸಿಎಂ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ಮತ್ತೊಂದು ಸುತ್ತಿನ ವಾದ ಮಂಡನೆ ಮಾಡಲಿದ್ದಾರೆ. ಅಲ್ಲಿಯವರೆಗೆ ಸಿದ್ದರಾಮಯ್ಯಗೆ ಸ್ವಪ್ಪ ರಿಲೀಫ್ ಸಿಕ್ಕಂತಾಗಿದೆ.
ವಾದ-ಪ್ರತಿವಾದದ ವಿವರ ಇಲ್ಲಿದೆ
ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ: 17 ಎ ಅಡಿ ಪ್ರಾಸಿಕ್ಯೂಷನ್ ಗೆ ಪೊಲೀಸರು ಅನುಮತಿ ಕೇಳಬಹುದು. ಅದಕ್ಕೂ ಮೊದಲು ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು. ಪ್ರಾಥಮಿಕ ತನಿಖೆಯ ವಿವರವನ್ನು ಸಕ್ಷಮ ಪ್ರಾಧಿಕಾರಕ್ಕೆ ನೀಡಬೇಕು. ಲಲಿತಾ ಕುಮಾರಿ ಪ್ರಕರಣ ಉಲ್ಲೇಖಿಸಿದರು.
ನ್ಯಾ.ಎಂ.ನಾಗಪ್ರಸನ್ನ: ಎಫ್‌ಐಆರ್ ದಾಖಲಿಸುವ ಮೊದಲು ಪ್ರಾಥಮಿಕ ತನಿಖೆ ಅಗತ್ಯವೆಂದಿದೆ…. ಆದರೆ 17 ಎ ಅಡಿ ಅನುಮತಿಗೆ ಪ್ರಾಥಮಿಕ ತನಿಖೆ ಆಗಿರಬೇಕಿಂದಿಲ್ಲ ? ವಿಚಾರಣೆ, ತನಿಖೆ ಗೂ ಮುನ್ನ 17 ಎ ಅನುಮತಿ ಬೇಕಲ್ಲವೇ ಎಂದು ಅಡ್ವೊಕೆಟ್ ಜನರಲ್ಗೆ ನ್ಯಾ.ಎಂ.ನಾಗಪ್ರಸನ್ನ ಪ್ರಶ್ನಿಸಿದರು.
ಎಜಿ: ಯಾವ ಕೇಸ್ ನಲ್ಲಿ ಪ್ರಾಥಮಿಕ ತನಿಖೆ ಬೇಕೆಂಬುದನ್ನು ಸುಪ್ರೀಂಕೋರ್ಟ್ ಹೇಳಿದೆ. ಇದು 22 ವರ್ಷಕ್ಕಿಂತ ಹಳೆಯ ಕೇಸ್ ಆಗಿರುವುದರಿಂದ ಪ್ರಾಥಮಿಕ ತನಿಖೆ ಬೇಕು. . 17 ಎ ಅಡಿಯಲ್ಲಿ ಕೇಂದ್ರ ಸರ್ಕಾರ ಮಾರ್ಗಸೂಚಿ ರೂಪಿಸಿದೆ. ಖಾಸಗಿ ದೂರುದಾರರನ್ನು ಪೊಲೀಸರಿಗೆ ಮೇಲ್ತಸ್ತರದಲ್ಲಿ ಇಡಲಾಗದು…. ತನಿಖಾಧಿಕಾರಿ ತನಗೆ ಬರುವ ಮಾಹಿತಿ ಪರಿಶೀಲಿಸುತ್ತಾನೆ…. ಆದರೆ ಖಾಸಗಿ ದೂರುದಾರರ ವಿಷಯದಲ್ಲಿ ಹೀಗಾಗುವುದಿಲ್ಲ.
ಜಡ್ಜ್: ಎಲ್ಲ ನಾಗರಿಕರು ಎಲ್ಲರ ವಿರುದ್ಧ ದೂರು ನೀಡಿದರೆ ಸಮಸ್ಯೆ ಆಗಲಿದೆ. ಹೀಗಾಗಿ ಡಾ.ಅಶೋಕ್ ಕೇಸ್ನಲ್ಲಿ ಮಾರ್ಗಸೂಚಿ ರೂಪಿಸಲಾಗಿದೆ.
ಎಜಿ: ರಾಜ್ಯಪಾಲರು ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು. ಸರ್ಕಾರಕ್ಕೆ ಶೋಕಾಸ್ ನೋಟಿಸ್ ನೀಡುವ ಬದಲು ವರದಿ ಪಡೆಯಬೇಕಿತ್ತು. ವರದಿಯ ಬಲವಿಲ್ಲದೇ ರಾಜ್ಯಪಾಲರು ಅನುಮತಿ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ 17ಎ ಮಾರ್ಗಸೂಚಿ ಆಧರಿಸಿ ಎಜಿ ವಾದಮಂಡನೆ ಮಾಡಿದರು.
ಎಜಿ: ಸಿಎಂ ಕೈಗೊಂಡ ನಿರ್ಧಾರ, ಶಿಫಾರಸಿನಲ್ಲಿ ಅಪರಾಧದ ಅಂಶವಿರಬೇಕು. 17 ಎ ಅಡಿ ಅನುಮತಿ ನೀಡುವಾಗ ಕೃತ್ಯ ಕರ್ತವ್ಯದ ಭಾಗವಾಗಿತ್ತೇ ನೋಡಬೇಕು ಎಂದು ಚಂದ್ರಬಾಬು ನಾಯ್ಡು ವರ್ಸಸ್ ಆಂಧ್ರಪ್ರದೇಶ ಕೇಸ್ ಉಲ್ಲೇಖಿಸಿದರು. ಹಾಗೇ ಬಿ.ಎಸ್. ಯಡಿಯೂರಪ್ಪ ಪ್ರಕರಣ ಉಲ್ಲೇಖಿಸಿದ ಎಜಿ, ಡಿನೋಟಿಫಿಕೇಷನ್ ಕೇಸ್ ನಲ್ಲಿ ಸಿಎಂ ಬಿಎಸ್‌ವೈ ತೀರ್ಮಾನ ಕೈಗೊಂಡಿದ್ದರು. ಆದರೆ ಈ ಕೇಸಿನಲ್ಲಿ ಸಿದ್ದರಾಮಯ್ಯ ತೀರ್ಮಾನ ಕೈಗೊಂಡಿಲ್ಲ
ಎಜಿ: ಸಿಎಂ ಕರ್ತವ್ಯದ ಭಾಗವಾಗಿ ಈ ಕೃತ್ಯ ನಡೆದಿಲ್ಲ. ಇದಕ್ಕೆ ಅವಕಾಶ ಕೊಟ್ಟರೆ ದಿನನಿತ್ಯ ಹಲವು ಖಾಸಗಿ ದೂರು ದಾಖಲಾಗಬಹುದು. ಸಕ್ಷಮ ಪ್ರಾಧಿಕಾರಿಯೇ ಇದನ್ನೆಲ್ಲಾ ವಿಚಾರಣೆ ನಡೆಸಿದರೆ ಸಮಸ್ಯೆ ಆಗಲಿದೆ. ಪೊಲೀಸ್ ಅಧಿಕಾರಿಯ ಮೂಲಕವೇ 17ಎ ಅಡಿ ಅನುಮತಿ ಪಡೆಯಬೇಕು.
ಎಜಿ: 3 ವಾಲ್ಯೂಮ್ ಗಳ ದಾಖಲೆಗಳನ್ನು ರಾಜ್ಯಪಾಲರ ಪರ ವಕೀಲರು ನೀಡಿದ್ದಾರೆ. ಆದರೆ ಷೋಕಾಸ್ ನೋಟಿಸ್ ನೀಡುವ ಮುನ್ನ ಪ್ರಾಥಮಿಕ ವರದಿ ಇಲ್ಲ. 17 ಎ ಅಡಿ ರಾಜ್ಯಪಾಲರೇ ಪ್ರಾಥಮಿಕ ತನಿಖೆ ನಡೆಸುವಂತಿಲ್ಲ. ತನಿಖಾಧಿಕಾರಿಯಂತೆ ರಾಜ್ಯಪಾಲರು ವರ್ತಿಸುವಂತಿಲ್ಲ.
ಜಡ್ಜ್: ಎಫ್‌ಐಆರ್ ದಾಖಲಿಸುವ ಮುನ್ನ 17ಎ ಅನುಮತಿ ಪಡೆಯಬೇಕು. ಕೋರ್ಟ್ ಸೂಚಿಸಿದ್ದರೆ ಎಫ್‌ಐಆರ್ ದಾಖಲಾಗುತ್ತಿತ್ತು. ಇದನ್ನು ಪಡೆಯಲು ಖಾಸಗಿ ದೂರುದಾರರಿಗೆ ಅನುಮತಿಗೆ ಅವಕಾಶ ನೀಡಲಾಗಿದೆ.
ಎಜಿ: ತನಿಖಾಧಿಕಾರಿ ಪ್ರಾಥಮಿಕ ತನಿಖೆ ನಡೆಸಬೇಕು, ರಾಜ್ಯಪಾಲರಲ್ಲ. ರಾಜ್ಯಪಾಲರು ಅನುಸರಿಸಿದ ಪ್ರಕ್ರಿಯೆಗೆ ಕಾನೂನಿನಡಿ ಅವಕಾಶವಿಲ್ಲ. ರಾಜ್ಯಪಾಲರು ಖಾಸಗಿ ದೂರುದಾರರಿಗೆ ಅವಕಾಶವನ್ನೇ ನೀಡಬಾರದಿತ್ತು. ದೂರುದಾರ ಪ್ರದೀಪ್ ಕುಮಾರ್ ಪೊಲೀಸರಿಗೆ ದೂರನ್ನೇ ನೀಡಿರಲಿಲ್ಲ. ಖಾಸಗಿ ದೂರುದಾರರ ಮನವಿಯನ್ನು ರಾಜ್ಯಪಾಲರು ಹಿಂತಿರುಗಿಸಬೇಕಿತ್ತು.
ಎಜಿ: ಸಚಿವ ಸಂಪುಟದ ನಿರ್ಧಾರವನ್ನು ತಿರಸ್ಕರಿಸುವ ಅನಿಯಂತ್ರಿತ ಅಧಿಕಾರವಿಲ್ಲ. ರಾಜ್ಯಪಾಲರ ಆದೇಶದಲ್ಲಿ ಇದಕ್ಕೆ ಕಾರಣಗಳಿರಬೇಕು. ರಾಜ್ಯಪಾಲರು ಪರಿಶೀಲಿಸಿದ ಕಡತದಲ್ಲಲ್ಲ. ಇನ್ನು ಸ್ನೇಹಮಯಿ ಕೃಷ್ಣ ಮನವಿಯಲ್ಲಿ ಸಿಬಿಐ ತನಿಖೆ ಕೋರಲಾಗಿದೆ.. ರಾಜ್ಯಪಾಲರ ಆದೇಶ 17ಎ ಅಡಿ ಇರಬೇಕೇ ಹೊರತು ಅವರ ಫೈಲ್ ನೋಟಿಂಗ್ ಗಳಲ್ಲ ಎಂದು ಹೇಳಿ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮುಗಿಸಿದರು.
ಅಭಿಷೇಕ್ ಮನು ಸಿಂಘ್ವಿ: ತಾವು ಸೆಪ್ಟೆಂಬರ್ 12ರಂದು ವಾದಿಸುವುದಾಗಿ ಸಿದ್ದರಾಮಯ್ಯನವರ ಪರ ವಕೀಲ ಅಭಿಷೇಕ್ ಸಿಂಘ್ವಿ ಕೋರ್ಟ್ಗೆ ಮನವಿ ಮಾಡಿದರು.
ಸಿಎಂ ಪರ ಹಿರಿಯ ವಕೀಲ ರವಿ ವರ್ಮಕುಮಾರ್: ದೂರುದಾರರು ಕೆಸರೆ ಗ್ರಾಮನೇ ಇಲ್ಲ ಎಂದು ಆರೋಪಿಸಿದ್ದಾರೆ. ಅವರು ಗ್ರಾಮ ನುಂಗಿಬಿಟ್ಟಿದ್ದಾರೆ, ಗ್ರಾಮ ಎಲ್ಲಿದೆ, ಸರ್ವೆ ನಂಬರ್ ಎಲ್ಲಿದೆ ನಾನು ತೋರಿಸುತ್ತೇನೆ.
ಸ್ನೇಹಮಯಿ ಕೃಷ್ಣ ಪರ ವಕೀಲೆ ಲಕ್ಷ್ಮಿ ಅಯ್ಯಂಗಾರ್ ವಾದ: 1996 – 1999 ಅವಧಿಯಲ್ಲಿ ಡಿಸಿಎಂ ಆಗಿದ್ದಾಗ ಡಿನೋಟಿಫಿಕೇಷನ್ ಮಾಡಲಾಗಿದೆ. 2004-2007 ರಲ್ಲಿ ಡಿಸಿಎಂ ಆಗಿದ್ದಾಗ ಭೂಪರಿವರ್ತನೆ ಮಾಡಲಾಗಿದೆ. 2013 – 2018 ವರೆಗೆ ಸಿಎಂ ಆಗಿದ್ದಾಗ ಪರಿಹಾರದ ಸೈಟ್ ಗೆ ಅರ್ಜಿ ಸಲ್ಲಿಸಲಾಗಿದೆ. 2018 – 2022 ವರೆಗೆ ಸಿದ್ದರಾಮಯ್ಯ ಶಾಸಕರಾಗಿದ್ದರು. ಸರ್ಕಾರಿ ಗೆಸ್ಟ್ ಹೌಸ್ ನಲ್ಲಿ ಮುಡಾದಿಂದ ಸೇಲ್ ಡೀಡ್ ಮಾಡಿಕೊಡಲಾಗಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಹೋಗದೇ ಸೇಲ್ ಡೀಡ್ ಮಾಡಲಾಗಿದೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಹೀಗೆ ಮಾಡಲಾಗಿದೆ.
ಲಕ್ಷ್ಮಿ ಅಯ್ಯಂಗಾರ್: ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗಲೇ ಈ ಎಲ್ಲಾ ಚಟುವಟಿಕೆ ನಡೆದಿವೆ. ಪತ್ನಿಗೆ ಬೇರೆ ಆದಾಯದ ಮೂಲಗಳಿರಲಿಲ್ಲ. ಆದಾಯ ತೆರಿಗೆ ರಿಟರ್ನ್ ಅನ್ನು ಪತ್ನಿ ಫೈಲ್ ಮಾಡಿಲ್ಲ. ಹೀಗಾಗಿ ಪತ್ನಿಯ ಆಸ್ತಿಯನ್ನು ಪತಿಯ ಆಸ್ತಿ ಎಂದೇ ಪರಿಗಣಿಸಬೇಕು. ಸಿದ್ದರಾಮಯ್ಯ ಮೇಲಿನ ಆರೋಪಗಳಿಗೆ ಪುರಾವೆಗಳಿವೆ ಎಂದು ಹೇಳಿ ದೂರುದಾರ ಸ್ನೇಹಮಯಿ ಕೃಷ್ಣ ಪರ ಲಕ್ಷ್ಮಿ ಅಯ್ಯಂಗಾರ್ ವಾದಮಂಡನೆ ಪೂರ್ಣಗೊಳಿಸಿದರು.
Post a comment
Log in to write reviews