ಮುಂಬೈ: ಆರ್ಥಿಕ ದೃಷ್ಟಿಕೋನದ ವಿವರವಾದ ಮೌಲ್ಯಮಾಪನದ ನಂತರ, ಭಾರತೀಯ ರಿಸರ್ವ್ ಬ್ಯಾಂಕ್ ಸತತ 9ನೇ ಬಾರಿಯೂ ಬಡ್ಡಿದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಈ ಹಿಂದೆ ಇರುವಂತೆ ಶೇಕಡಾ 6.5ರಲ್ಲೇ ಮುಂದುವರಿಸಿದೆ. ತನ್ನ ಆರ್ಥಿಕ ನೀತಿಗಳ ಸಭೆ ಬಳಿಕ ಇಂದು (ಆಗಸ್ಟ್ 8) ಸುದ್ದಿಗೋಷ್ಠಿ ನಡೆಸಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಬಡ್ಡಿದರವನ್ನು ಯಥಾಸ್ಥಿತಿಯಲ್ಲೇ ಮುಂದುವರೆಸುವುದಾಗಿ ಘೋಷಿಸಿದ್ದಾರೆ.
"ಸ್ಥಾಯಿ ಠೇವಣಿ ಸೌಲಭ್ಯದ ದರವು ಶೇ 6.25, ಮಾರ್ಜಿನಲ್ ಸ್ಟ್ಯಾಂಡಿಂಗ್ ಸೌಲಭ್ಯ ದರ ಹಾಗೂ ಬ್ಯಾಂಕ್ ದರವನ್ನು ಶೇ 6.75ರಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ದಾಸ್ ಇದೇ ವೇಳೆ ಪ್ರಕಟಿಸಿದರು. ಹಣದುಬ್ಬರವನ್ನು ನಿಯಂತ್ರಣದಲ್ಲಿ ಇಡುವ ದೃಷ್ಟಿಕೋನದಿಂದ ರೆಪೋ ದರವನ್ನು ಸ್ಥಿರವಾಗಿಡುವ ನಿರ್ಧಾರಕ್ಕೆ ಬರಲಾಗಿದೆ. ಆಹಾರ ಹಣದುಬ್ಬರ ಮತ್ತು ಇತರ ಆರ್ಥಿಕ ಅಂಶಗಳಿಂದಾಗಿ ಹಣದುಬ್ಬರವನ್ನು ಶೇಕಡಾ 4ರೊಳಗೆ ತರುವ ಗುರಿಯ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಅಷ್ಟೇ ಅಲ್ಲ ತನ್ನ ಗುರಿ ತಲುಪಲು ಕೇಂದ್ರೀಯ ಬ್ಯಾಂಕ್ ಸವಾಲುಗಳನ್ನು ಎದುರಿಸುತ್ತಿದೆ.
ಹಣದುಬ್ಬರದ ಒತ್ತಡಗಳನ್ನು ನಿಭಾಯಿಸಬೇಕಾದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಆರ್‌ಬಿಐಗೆ ಅನಿವಾರ್ಯವಾಗಿದ್ದು, ಜಾಗರೂಕ ಹೆಜ್ಜೆ ಇಡಬೇಕಾಗಿದೆ. ದೇಶದ ಆರ್ಥಿಕ ಚೇತರಿಕೆ ಹಾಗೂ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಆರ್‌ಬಿಐ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಗವರ್ನರ್ ದಾಸ್ ಒತ್ತಿ ಹೇಳಿದರು. ಎಂಪಿಸಿಯ ನಿರ್ಧಾರವು ಸಮತೋಲಿತವಾಗಿದ್ದು, ಈಗಿನ ಬೆಳವಣಿಗೆ ದರವನ್ನು ಕುಂಠಿತಗೊಳಿಸದೇ ಹಣದುಬ್ಬರವನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ಆರ್ಥಿಕತೆ ಬೆಳವಣಿಗೆ ಹೊಂದುತ್ತಿದೆ ಎಂದು ಸಂತೃಪ್ತಿಯಿಂದ ಇರಲು ಯಾವುದೇ ಅವಕಾಶ ನೀಡಬಾರದು ಎಂದು ಎಚ್ಚರಿಸಿರುವ ಗವರ್ನರ್, ಕೋರ್ ಹಣದುಬ್ಬರವು ಗಣನೀಯವಾಗಿ ಕುಸಿದಿದೆ. ಆದರೆ ನಿರಂತರ ಆಹಾರ ಬೆಲೆ ಏರಿಕೆಗಳು ಮೊದಲ ತ್ರೈಮಾಸಿಕದಲ್ಲಿ ಹಣದುಬ್ಬರವನ್ನು ನಿಧಾನಗೊಳಿಸಿವೆ ಎಂದು ಹೇಳಿದ್ದಾರೆ. ಮೂರು ದಿನಗಳ ಹಣಕಾಸು ನೀತಿ ಸಮಿತಿ ಎಂಪಿಸಿ ಸಭೆಯ ಮುಕ್ತಾಯದ ನಂತರ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಗುರುವಾರ ಪತ್ರಿಕಾಗೋಷ್ಠಿ ನಡೆಸಿದರು.
Post a comment
Log in to write reviews