ಪಾಟ್ನಾ: 12 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ಸೇತುವೆಯೊಂದು ಉದ್ಘಾಟನೆಗೆ ಹತ್ತಿರವಿರುವಾಗ ಕುಸಿದು ಬಿದ್ದ ಆತಂಕಕಾರಿ ಘಟನೆ ಬಿಹಾರದ ಅರಾರಿಯಾ ಜಿಲ್ಲೆಯಲ್ಲಿ ನಡೆದಿದೆ.
ಸೇತುವೆ ಕುಸಿಯುತ್ತಿರುವ ವೇಳೆ ನದಿಯ ದಡದಲ್ಲಿ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಘಟನೆಯನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿರ್ಮಾಣ ಕಂಪನಿಯ ಮಾಲೀಕನ ನಿರ್ಲಕ್ಷ್ಯದಿಂದ ಸೇತುವೆ ಕುಸಿದು ಬಿದ್ದಿದೆ. ಈ ಬಗ್ಗೆ ಆಡಳಿತವು ತನಿಖೆ ನಡೆಸಬೇಕು ಎಂದು ಸಿಕ್ತಿ ಶಾಸಕ ವಿಜಯ್ ಕುಮಾರ್ ಹೇಳಿದ್ದಾರೆ.
ಬಿಹಾರದಲ್ಲಿ ನಿರ್ಮಾಣ ಹಂತದ ಸೇತುವೆಗಳು ಉದ್ಘಾಟನೆಗೂ ಮೊದಲೇ ಕುಸಿಯುವುದು ಹೊಸದೇನಲ್ಲ, ಈ ಹಿಂದೆ ಭಗಲ್ಪುರದ ಸೇತುವೆಯೂ ಹೀಗೆ ಉದ್ಘಾಟನೆ ಮಾಡುವ ಮೊದಲೇ ಕುಸಿದು ಬಿದ್ದಿತ್ತು. ಈ ಸೇತುವೆ ಕುಸಿತಗಳು ರಾಜ್ಯದಲ್ಲಿ ಸರ್ಕಾರಿ ಕಾಮಗಾರಿಗಳಲ್ಲಿ ನಡೆಯುತ್ತಿರುವ ಹಗರಣ ಹಾಗೂ ಭ್ರಷ್ಟಾಚಾರಗಳನ್ನು ಎತ್ತಿ ತೋರಿಸುತ್ತಿವೆ ಎಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.
ಕುಸಿತದಲ್ಲಿ ಯಾವುದೇ ಸಾವು-ನೋವು ವರದಿಯಾಗಿಲ್ಲ. ಬಿಹಾರದ ಅರಾರಿಯಾ ಜಿಲ್ಲೆಯ ಕುರ್ಸಕಾಂತ ಮತ್ತು ಸಿಕ್ತಿ ನಡುವಿನ ಪ್ರಯಾಣದ ಅನುಕೂಲಕ್ಕಾಗಿ ಈ ಸೇತುವೆಯನ್ನು ನಿರ್ಮಿಸಲಾಗಿತ್ತು ಎಂದು ತಿಳಿದು ಬಂದಿದೆ.
Post a comment
Log in to write reviews