ನವದೆಹಲಿ: ಕೇಂದ್ರದ ಎನ್‌ಡಿಎ ಸರ್ಕಾರದ ಬಜೆಟ್ ಜುಲೈ ತಿಂಗಳಲ್ಲಿ ನಡೆಯಲಿದ್ದು, ಇದಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಸಭೆಗಳನ್ನು ನಡೆಸುತ್ತಿದ್ದಾರೆ.
ಬಜೆಟ್‌ಗಾಗಿ ದೇಶದ ಕೈಗಾರಿಕಾ ಒಕ್ಕೂಟಗಳ ಜೊತೆಗೆ ಹಣಕಾಸು ಸಚಿವೆ ಸಭೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೂ ಮುನ್ನ ಜೂನ್ 18ರಂದು ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಲೋತ್ರಾ ಅವರನ್ನು ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಕೈಗಾರಿಕಾ ಒಕ್ಕೂಟದ ಮೂಲಗಳು ತಿಳಿಸಿವೆ.
ಎನ್‌ಡಿಎ ಮೈತ್ರಿಕೂಟ ಸರ್ಕಾರದ ಆರ್ಥಿಕ ಕಾರ್ಯಸೂಚಿ ಈ ಬಜೆಟ್ ಒಳಗೊಂಡಿರಲಿದೆ ಎನ್ನಲಾಗಿದೆ. ಅಲ್ಲದೆ ಚಿಲ್ಲರೆ ಹಣದುಬ್ಬರದ ಏರಿಕೆ ತಡೆಯುವ ಜೊತೆಗೆ ದೇಶದ ಆರ್ಥಿಕತೆಗೆ ಬಲವರ್ಧನೆ ನೀಡುವ ಅಗತ್ಯ ಕ್ರಮಗಳತ್ತ ಸಚಿವೆ ನಿರ್ಮಲಾ ಎದುರು ನೋಡಬೇಕಿದೆ. ಅಲ್ಲದೆ, ಮೈತ್ರಿ ಕೂಟಕ್ಕೂ ಅಗತ್ಯತೆ ಪೂರೈಸಲು ಸಂಪನ್ಮೂಲಗಳ ಹುಡುಕಾಟ ನಡೆಸುವ ಸವಾಲು ಕೂಡ ಅವರ ಮುಂದಿದೆ.
ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್‌ಗೆ ಹೆಚ್ಚಿಸಲು ಮತ್ತು 2047ರ ವೇಳೆಗೆ 'ವಿಕಸಿತ ಭಾರತ'ವಾಗಿ ರೂಪಿಸಲು ಅಗತ್ಯವಿರುವ ಆರ್ಥಿಕ ಕಾರ್ಯಸೂಚಿ ರೂಪಿಸುವ ಹೊಣೆ ಈ ಸಾಲಿನ ಬಜೆಟ್‌ಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಜಿಡಿಪಿಯು ಶೇ 7.2ರಷ್ಟು ಪ್ರಗತಿ ಕಾಣಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಅಂದಾಜಿಸಿದೆ.
Post a comment
Log in to write reviews