ಕೀವ್(ಉಕ್ರೇನ್): ಉಕ್ರೇನ್‌ನ ಮಧ್ಯ-ಪೂರ್ವ ಪ್ರದೇಶದ ಪೋಲ್ಟವಾ ನಗರದ ಶೈಕ್ಷಣಿಕ ಸಂಸ್ಥೆ ಮತ್ತು ಸಮೀಪದ ಆಸ್ಪತ್ರೆಯ ಮೇಲೆ ರಷ್ಯಾ ಮಂಗಳವಾರ ನಡೆಸಿದ ಭಾರಿ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 51 ಜನರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 2022ರಿಂದ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ನಡೆಸಿದ ಅತ್ಯಂತ ಭೀಕರ ದಾಳಿಗಳ ಪೈಕಿ ಇದು ಒಂದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಈ ಘಟನೆಯಿಂದ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿರುವ ಝೆಲೆನ್‌ಸ್ಕಿ, ಹಲವಾರು ಜನರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ದಾಳಿಯ ಕುರಿತು ಅಂತಾರಾಷ್ಟ್ರೀಯ ತನಿಖೆಗೂ ಒತ್ತಾಯಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ನಿಂತವರಿಗೆ ಧನ್ಯವಾದ ಹೇಳಿದ್ದಾರೆ.
'ನಾನು ಈಗಾಗಲೇ ಈ ಭೀಕರ ದಾಳಿಯ ಪ್ರಾಮಾಣಿಕ, ವಿಸ್ತೃತ ತನಿಖೆಗೆ ಆದೇಶಿಸಿದ್ದೇನೆ. ಇದೇ ವೇಳೆ, ರಕ್ಷಣಾ ಕಾರ್ಯಾಚರಣೆಗೆ ಬೇಕಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ನಮಗೆ ನೆರವಿನ ಹಸ್ತ ಚಾಚಿರುವ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ' ಎಂದು ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ತಿಳಿಸಿದ್ದಾರೆ.
ಈ ದಾಳಿಯ ಹಿನ್ನೆಲೆಯಲ್ಲಿ ಪಾಶ್ಚಿಮಾತ್ಯ ಮಿತ್ರದೇಶಗಳಿಗೆ ಮತ್ತೊಮ್ಮೆ ಮನವಿ ಮಾಡಿರುವ ಅವರು, 'ಕೀವ್‌ಗೆ ಹೆಚ್ಚು ವಾಯು ರಕ್ಷಣಾ ಸಾಮಗ್ರಿಗಳನ್ನು ಪೂರೈಸುವಂತೆ ಹಾಗೂ ರಷ್ಯಾ ವಿರುದ್ಧ ದಾಳಿ ನಡೆಸಲು ಇರುವ ವಾಯು ಪ್ರದೇಶಗಳ ನಿರ್ಬಂಧಗಳನ್ನು ತೆರವುಗೊಳಿಸುವಂತೆಯೂ ಅವರು ಮನವಿ ಮಾಡಿದ್ದಾರೆ. (ಎಎನ್‌ಐ)
Post a comment
Log in to write reviews