ಚಿಕ್ಕಬಳ್ಳಾಪುರ:ತನಿಖಾ ಸಂಸ್ಥೆಗಳು ಸರ್ಕಾರದ ತಾಳಕ್ಕೆ ಕುಣಿಯುತ್ತಿವೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಾತ್ರ ಕೂಡ ಹೊರಬರಬೇಕು” ಎಂದು ನಟ ಚೇತನ್ ಆಗ್ರಹಿಸಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಡಾ ಹಗರಣ ವಾಲ್ಮೀಕಿ ನಿಗಮದ ಹಗರಣ ಸೇರಿದಂತೆ ಸಾಕಷ್ಟು ಹಗರಣಗಳ ತನಿಖೆ ಮಾಡುವಲ್ಲಿ ಎಸ್.ಐ.ಟಿ ವಿಫಲವಾಗುತ್ತಿದೆ. ಸರಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ” ಎಂದು ಆರೋಪಿಸಿದರು.
“ಮುಡಾ ಹಗರಣದಲ್ಲಿ ಯಾರು ಯಾರು ಭಾಗಿಯಾಗಿದ್ದಾರೆ. ಅವರೆಲ್ಲರನ್ನೂ ಪಕ್ಷಾತೀತವಾಗಿ, ಪಾರದರ್ಶಕವಾಗಿ ವಿಚಾರಣೆಗೊಳಪಡಿಸಿ ತನಿಖೆ ನಡೆಸಬೇಕು. ಸಿಎಂ ಸಿದ್ದರಾಮಯ್ಯ ಅದು ಬಿಜೆಪಿ ಅವಧಿಯಲ್ಲಿ ಆಗಿರುವುದು ಎಂದು ಹೇಳುತ್ತಿರುವುದು ಸರಿಯಾದ ಕ್ರಮವಲ್ಲ” ಎಂದರು.
ವಿಧಾನಸೌಧದ ಮುಂಭಾಗದಲ್ಲಿ 25 ಅಡಿ ಉದ್ದದ ಭುವನೇಶ್ವರಿ ಪ್ರತಿಮೆ ಸ್ಥಾಪಿಸಿರುವುದು ಮೌಢ್ಯದ ಪ್ರತೀಕ. ವೈಜ್ಞಾನಿಕ ಮನಸ್ಥಿತಿಯನ್ನೇ ಹೋಗಲಾಡಿಸುವ ಪ್ರಯತ್ನವಿದು. ಇದನ್ನು ಎಲ್ಲರೂ ಖಂಡಿಸಬೇಕು” ಎಂದು ಹೇಳಿದರು.
ರಾಜ್ಯದ ಕುರಿ ಕಳ್ಳತನ ಹೆಚ್ಚುತ್ತಿರುವ ಕಾರಣ ಕುರಿಗಾಹಿಗಳು ಬಂದೂಕು ವಿತರಣೆ ಮಾಡುವ ಕುರಿತು ಸರಕಾರ ಬಹಳ ದಿನಗಳಿಂದ ಚಿಂತನೆ ನಡೆಸುತ್ತಿದೆ. ಇದೂ ಸಹ ಸರಿಯಾದ ಕ್ರಮವಲ್ಲ. ಇದು ಸಮಾಜದ ಶಾಂತಿ, ಸುರಕ್ಷತೆಗೆ ಹಾನಿಕಾರಕ. ಇದಕ್ಕೆ ಬದಲಾಗಿ ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿ. ನೀವು ಬಂದೂಕು ಕೊಡುತ್ತಿರುವುದು ರಕ್ಷಣೆಗೆ ಅಲ್ಲ. ಮನುಷ್ಯರ ನಡುವಿನ ಸಂಘರ್ಷಕ್ಕೆ ದಾರಿಯಾಗಲಿದೆ” ಎಂದು ನಟ ಚೇತನ್ ಕಳವಳ ವ್ಯಕ್ತಪಡಿಸಿದರು.
Post a comment
Log in to write reviews