ಬೆಂಗಳೂರು: ದಕ್ಷಿಣ ಭಾರತ ಉತ್ಸವ – 2024 ಅನ್ನು ಬೆಂಗಳೂರಿನಲ್ಲಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರಾದ ಡಾ ವಿ ರಾಮ್ ಪ್ರಸಾತ್ ಮನೋಹರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ, ತಮಿಳುನಾಡು ಆಂಧ್ರಪ್ರದೇಶ, ಪಾಂಡಿಚೇರಿ, ಲಕ್ಷದ್ವೀಪ, ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದ ಬೆಳವಣಿಗೆಗೆ ವಿಫುಲ ಅವಕಾಶಗಳಿವೆ. ದಕ್ಷಿಣ ಭಾರತದ ಸೆವೆನ್ ಸಿಸ್ಟರ್ಸ್ ರಾಜ್ಯಗಳಲ್ಲಿ ಈ ಕ್ಷೇತ್ರಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜೂನ್ 15 ಮತ್ತು 16 ರಂದು ದಕ್ಷಿಣ ಭಾರತ ಉತ್ಸವ - 2024 ನ್ನು ಆಯೋಜಿಸಲಾಗಿದೆ ಎಂದರು.
ಏಳು ರಾಜ್ಯಗಳಲ್ಲಿರುವ ಕಲೆ, ಸಂಸ್ಕೃತಿ, ಸಂಪ್ರದಾಯ, ವೈದ್ಯಕೀಯ, ವನ್ಯಜೀವಿ. ಕರಾವಳಿ ಪ್ರವಾಸೋದ್ಯಮದಲ್ಲಿನ ಅವಕಾಶಗಳನ್ನು ಸಂಯೋಜಿಸಿ ದೇಶ ವಿದೇಶಗಳಿಂದ ಬರುವಂತಹ ಪ್ರವಾಸಿಗರಿಗೆ ಸಮಗ್ರ ಸೇವೆ ಒದಗಿಸುವ ಗುರಿಯನ್ನು ಹೊಂದಿರುವಂತಹ ಯೋಜನೆ ಇದಾಗಿದೆ. ಎಫ್‌ಕೆಸಿಸಿಐ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಸರಕಾರ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ ದಕ್ಷಿಣ ಭಾರತದ ಸಂಸ್ಕೃತಿ, ಕಲೆ ಮತ್ತು ಆಹಾರ ಶೈಲಿಯನ್ನು ದೇಶ ವಿದೇಶಗಳಿಗೆ ಪ್ರಚುರ ಪಡಿಸುವ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.
ಎಫ್‌ಕೆಸಿಸಿಐ ಅಧ್ಯಕ್ಷರಾದ ರಮೇಶ್ ಚಂದ್ರ ಲಹೋಟಿ ಮಾತನಾಡಿ, ದಕ್ಷಿಣ ಭಾರತ ರಾಜ್ಯಗಳ ಪ್ರವಾಸೋದ್ಯಮ ಹಾಗೂ ಆತಿಥ್ಯ ಕ್ಷೇತ್ರದಲ್ಲಿನ ವಿಫಲ ಅವಕಾಶವನ್ನು ಒಂದೇ ವೇದಿಕೆಯ ಅಡಿಯಲ್ಲಿ ಬಿಂಬಿಸುವಂತಹ ಮೊದಲ ಕಾರ್ಯಕ್ರಮ ಇದಾಗಿದೆ. ಕೇಂದ್ರಾಡಳಿತ ಪ್ರದೇಶ ಪಾಂಡಿಚೇರಿ ಒಳಗೊಂಡಂತೆ ದಕ್ಷಿಣ ಭಾರತದ 7 ರಾಜ್ಯಗಳು ಉತ್ಸವದಲ್ಲಿ ಭಾಗಿಯಾಗಲಿವೆ. ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಈ ಉದ್ದೇಶಕ್ಕೆ ಒಂದು ಕೋಟಿ ರೂಪಾಯಿ ನೀಡಿದ್ದು, ಪ್ರತಿವರ್ಷ ಇನ್ನಿತರ ದಕ್ಷಿಣ ರಾಜ್ಯಗಳಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುವುದು. ತಮಿಳುನಾಡು, ಪಾಂಡಿಚೇರಿ, ಆಂದ್ರಪ್ರದೇಶ, ಕೇರಳ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ರೋಡ್ ಶೋ ಮೂಲಕ ಹೂಡಿಕೆದಾರರನ್ನು ಆಕರ್ಷಿಸಲಾಗುತ್ತಿದೆ, ಹೈದರಾಬಾದ್‌ನಲ್ಲಿ ನಡೆದ ರೋಡ್ ಶೋಗೆ ಅತ್ಯುತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದರು.
ಎಫ್ ಕೆ ಸಿ ಸಿ ಐ ಉಪಾಧ್ಯಕ್ಷರಾದ ಉಮಾ ರೆಡ್ಡಿ, ಪ್ರವಾಸೋದ್ಯಮ ಸಮಿತಿ ಸಲಹೆಗಾರರಾದ ಕೆ ಶಿವ ಷಣ್ಮುಗಮ್ ಮತ್ತಿತರರು ಉಪಸ್ಥಿತರಿದ್ದರು.
Post a comment
Log in to write reviews