ಕಾಂಗ್ರೆಸ್ ಬಿಟ್ಟಿ ಭಾಗ್ಯಗಳನ್ನು ಘೋಷಿಸಿ ನಾಡಿನ ಖಜಾನೆ ಬರಿದು ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ವಿಧಾನ ಪರಿಷತ್ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಸಂಬಂಧ ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದರು.
ಸ್ವಾತಂತ್ರ್ಯ ಬಂದ ಬಳಿಕ 60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ದೇಶವನ್ನು ದೋಚಿದೆ. ಈಗ ನೋಡಿದರೆ ಈ ಭಾಗ್ಯ, ಆ ಭಾಗ್ಯ, ಎಂದು ಘೋಷಣೆ ಮಾಡುತ್ತ ದೇಶದ ಖಜಾನೆ ಬರಿದು ಮಾಡಲು ಹೊರಟಿದೆ ಎಂದರು.
ದೇಶದ ನಾಗರಿಕರಿಗೆ ಬೇಕಾಗಿರುವುದು ಶಿಕ್ಷಣ, ಆರೋಗ್ಯ, ಉದ್ಯೋಗ, ವಸತಿ. ಆದರೆ, ಇದಕ್ಕೆ ಪೂರಕವಾಗಿ ಯಾವ ಮೂಲ ಸೌಕರ್ಯವನ್ನು ಒದಗಿಸುವ ಯೋಜನೆಗಳು ಕಾಂಗ್ರೆಸ್ಸಿಗರಲ್ಲಿ ಇಲ್ಲ. ದೇಶದ ಅಭಿವೃದ್ಧಿಗಾಗಿ ಯಾವ ಯೋಚನೆ ಮತ್ತು ಯೋಜನೆ ಕಾಂಗ್ರೆಸ್ ಬಳಿ ಇಲ್ಲ. ಇಂಥವರ ಕೈಗೆ ಅಧಿಕಾರ ಹೋದರೆ ಜನರು ಅಧೋಗತಿ ತಲುಪುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್ ಆಡಳಿತದಲ್ಲಿರುವ ಕರ್ನಾಟಕ ರಾಜ್ಯ ಶ್ರೀಲಂಕ ಮತ್ತು ಕೇರಳ ಕಂಡಂಥ ದುಸ್ಥಿತಿಯನ್ನೇ ಕಾಣಬೇಕಾದೀತು. ಜನತೆ ಈ ಬಗ್ಗೆ ಎಚ್ಚರದಿಂದ ಇರಬೇಕೆಂದರು.
ಬಿಜೆಪಿ ಬೆಂಬಲಕ್ಕೆ ಕರೆ
ಕಳೆದ ಹತ್ತು ವರ್ಷದಿಂದ ಬಿಜೆಪಿ ಆಡಳಿತದಲ್ಲಿ ಸಮೃದ್ಧ ಭಾರತ ಸೃಷ್ಟಿಸಲಾಗುತ್ತಿದೆ. ಸಮರ್ಥ, ಸಶಕ್ತ ಭಾರತ ನಿರ್ಮಾಣಕ್ಕಾಗಿ ಮತ್ತೆ, ಮತ್ತೆ, ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಪದವೀಧರ ಮತದಾರರಲ್ಲಿ ಪ್ರಹ್ಲಾದ್ ಜೋಶಿ ಬೆಂಬಲ ಕೋರಿದ್ದರು. ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ಶಾಸಕ ಕೃಷ್ಣ ನಾಯ್ಕ, ಮಾಜಿ ಸಚಿವ ಆನಂದ ಸಿಂಗ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಚನ್ನಬಸವನ ಗೌಡ, ಎಸ್ಟಿ ಮೋರ್ಚಾ ಪ್ರಮುಖರಾದ ಬಂಗಾರು ಹನಮಂತ, ಹಾಗೂ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಉಪಸ್ಥಿತರಿದ್ದರು.
Post a comment
Log in to write reviews