ಬೆಂಗಳೂರು: ಧರ್ಮದ ಬಗ್ಗೆ ಪ್ರಚೋದನಕಾರಿ ಹಾಗೂ ಅವಹೇಳನಕಾರಿಯಾಗಿ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿ ಹಮಾರೆ ಬಾರಾ ಸಿನಿಮಾವನ್ನು ರಾಜ್ಯದಲ್ಲಿ ಪ್ರಸಾರ ಮಾಡದಂತೆ ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ.
ಇಂತಹ ಚಿತ್ರಗಳಿಗೆ ಅನುಮತಿ ನೀಡಿದರೆ ಧರ್ಮ ಹಾಗೂ ಜಾತಿಗಳ ಮಧ್ಯೆ ದ್ವೇಷ ಹುಟ್ಟಿಸಿದಂತಾಗುತ್ತದೆ. ಅಲ್ಲದೆ ದೇಶದಲ್ಲಿ ಒಂದು ಧರ್ಮವನ್ನು ಉದ್ದೇಶಪೂರ್ವಕವಾಗಿ ಗುರಿ ಮಾಡಿದಂತಾಗುತ್ತದೆ. ಚಿತ್ರಕ್ಕೆ ಸಂಬಂಧಿಸಿದಂತೆ ರಾಜ್ಯದ ಮುಸ್ಲಿಂ ಸಂಘಟನೆಗಳಿಂದ ಬಂದ ಮನವಿಯ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಕೋಮುಸೌಹಾರ್ಧಕ್ಕೆ ಧಕ್ಕೆ ಉಂಟು ಮಾಡಿ, ದೇಶದಲ್ಲಿ ಅಶಾಂತಿ ಉಂಟು ಮಾಡುವುದು, ಮುಸ್ಲಿಂ ಧರ್ಮದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವುದು ಒಂದು ಷಡ್ಯಂತ್ರವಾಗಿದೆ. ಚಲನಚಿತ್ರಗಳು ಸಮಾಜಕ್ಕೆ ಮಾರ್ಗದರ್ಶನ ನೀಡಬೇಕು. ಅದು ಬಿಟ್ಟು ಧರ್ಮಗಳ ಮಧ್ಯೆ ದ್ವೇಷ ಭಾವನೆ ಮೂಡಿಸುವುದಲ್ಲ. ಈ ವಿವಾದಾತ್ಮಕ ಚಿತ್ರವನ್ನು ರಾಜ್ಯದಲ್ಲಿ ಬಿಡುಗಡೆ ಮಾಡುವಂತಿಲ್ಲ. ಒಂದು ವೇಳೆ ಈ ಚಿತ್ರ ರಾಜ್ಯದಲ್ಲಿ ಬಿಡುಗಡೆಗೆ ಅನುಮತಿ ನೀಡಿದ್ದಲ್ಲಿ ಶಾಂತಿ ಭಂಗ ಉಂಟಾಗುತ್ತದೆ. ಅಲ್ಲದೆ ಮಹಿಳೆಯರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವಂತೆ ಬಿಂಬಿತವಾಗುವ ಸನ್ನಿವೇಶಗಳು ಚಿತ್ರದ ಟ್ರೇಲರ್‌ನಲ್ಲಿದೆ ಎಂದಿದೆ.
ಜೂ.7 ರಂದು ದೇಶಾದ್ಯಂತ ಬಿಡುಗಡೆಯಾದ ಈ ಚಿತ್ರಕ್ಕೆ ಸಂಬಂಧಿಸಿದವರಿಗೆ ನೋಟಿಸ್ ನೀಡಲು ಕಾಲಾವಕಾಶ ಕಡಿಮೆ ಇದ್ದು, ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಹಮಾರ ಬಾರಾಹ್ ಸಿನಿಮಾ ಹಾಗೂ ಟ್ರೇಲರ್ ಅನ್ನು ರಾಜ್ಯದ ಎಲೆಕ್ಟ್ರಾನಿಕ್ ಮಾಧ್ಯಮ, ಸಾಮಾಜಿಕ ಜಾಲತಾಣ , ಸಿನಿಮಾ ಮಂದಿರ ಹಾಗೂ ಖಾಸಗಿ ಟಿವಿ ಚಾನಲ್‌ಗಳಲ್ಲಿ ಎರಡು ವಾರಗಳ ಕಾಲ ಪ್ರಸಾರ ಮಾಡುವುದನ್ನು ನಿಷೇಧಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಬಿ.ಕೆ.ಭುವನೇಂಧ್ರ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.
Post a comment
Log in to write reviews