ತೆಲಂಗಾಣ: ಗುಡಿಸಲಿನಲ್ಲಿ ಮಲಗಿದ್ದ 82 ವರ್ಷದ ವೃದ್ಧೆಯ ಮೇಲೆ ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿ ಸಾಯಿಸಿರುವ ಘಟನೆ ತೆಲಂಗಾಣದ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.
ಮೃತರನ್ನು ಪಿಟ್ಲಾ ರಾಜಲಕ್ಷ್ಮಿ ಎಂದು ಗುರುತಿಸಲಾಗಿದೆ. ವೃದ್ಧೆಯ ಮುಖ ಮತ್ತು ಇತರ ದೇಹದ ಭಾಗಗಳನ್ನು ಸಹ ನಾಯಿಗಳು ತಿಂದು ಹಾಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬುಧವಾರ ರಾತ್ರಿ ಮನೆ ಸಮೀಪದ ಗುಡಿಸಲಿನಲ್ಲಿ ರಾಜಲಕ್ಷ್ಮಿ ಮಲಗಿದ್ದರು. ಗುಡಿಸಲಿಗೆ ಬಾಗಿಲು ಇರಲಿಲ್ಲ. ಈ ವೇಳೆ, ಗಾಢ ನಿದ್ದೆಯಲ್ಲಿದ್ದ ಆಕೆಯ ಮೇಲೆ ನಾಯಿಗಳು ಸುಲಭವಾಗಿ ನುಗ್ಗಿ ದಾಳಿ ಮಾಡಿವೆ. ಆಕೆಯ ದೇಹವನ್ನು ತಿಂದ ಬಳಿಕ ರಸ್ತೆಯ ಮೇಲೆ ನಾಯಿಯೊಂದು ವಾಂತಿ ಮಾಡುವುದನ್ನು ಕಂಡ ಸ್ಥಳೀಯರು ಕುಟುಂಬದವರನ್ನು ಎಚ್ಚರಿಸಿದ್ದಾರೆ. ಆಗ ಗುಡಿಸಲಿನಲ್ಲಿ ವೃದ್ಧೆಯನ್ನು ಕಚ್ಚಿ ತಿಂದು ಹಾಕಿರುವುದು ಗೊತ್ತಾಗಿದೆ. ಅಲ್ಲದೇ, ತಲೆ ಮತ್ತು ಹೊಟ್ಟೆಯ ಒಂದು ಭಾಗ ಕಾಣೆಯಾಗಿದ್ದವು. ಬೆಳಗ್ಗೆ ಸ್ವಲ್ಪ ದೂರದಲ್ಲಿ ದೇಹದ ಇತರ ಭಾಗಗಳು ಪತ್ತೆಯಾಗಿದೆ. ನಂತರ ಕೋಪಗೊಂಡ ಗ್ರಾಮಸ್ಥರು ಬೀದಿ ನಾಯಿಯನ್ನು ಕೊಂದು ಹಾಕಿದ್ದಾರೆ.
ಮೃತ ರಾಜಲಕ್ಷ್ಮಿ ಕಳೆದ ನಾಲ್ಕು ವರ್ಷಗಳಿಂದ ಹಾಸಿಗೆ ಹಿಡಿದ್ದರು. ಇಬ್ಬರು ಪುತ್ರರು ಆಕೆಯನ್ನು ತಮ್ಮ ಮನೆಯ ಹೊರಗೆ ಪ್ರತ್ಯೇಕ ಕೋಣೆಯಲ್ಲಿ ಇರಿಸಿ ಆರೈಕೆ ಮಾಡುತ್ತಿದ್ದರು. ಆಕೆ ಗುಡಿಸಲಿನಲ್ಲಿ ಮಲಗಿದ್ದಾಗ ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿದೆ. ಸದ್ಯ ಬಿಎನ್‌ಎಸ್‌ನ ಸೆಕ್ಷನ್ 194ರ ಅಡಿ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಖಿಲ್ ಮಹಾಜನ್ ಹೇಳಿದ್ದಾರೆ.
Post a comment
Log in to write reviews