ಲಖ್ನೋ : ರಾಮ್‌ಪಥ ನಿರ್ಮಾಣ ಮತ್ತು ವಾಯುವಿಹಾರದ ಕೆಳಗೆ ಚರಂಡಿಗಳನ್ನು ಹಾಕುವಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಉತ್ತರಪ್ರದೇಶ ಸರ್ಕಾರವು ಲೋಕೋಪಯೋಗಿ ಇಲಾಖೆ ಹಾಗು ಉತ್ತರಪ್ರದೇಶ ಜಲ ನಿಗಮದ ಆರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ.
ರಾಮ್‌ಪಥದ ಉದ್ದಕ್ಕೂ ಇರುವ ಸುಮಾರು 15 ಉಪ-ಪಥಗಳು ಮತ್ತು ಬೀದಿಗಳು ಮಳೆಯ ನಂತರ ತೀವ್ರವಾಗಿ ಜಲಾವೃತವಾಗಿವೆ. ಅಲ್ಲದೆ ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗಿರುವುದರಿಂದ ರಾಜ್ಯ ಸರ್ಕಾರವು ಅಹಮದಾಬಾದ್ ಮೂಲದ ಗುತ್ತಿಗೆದಾರ ಸಂಸ್ಥೆ ಭುವನ್ ಇನ್ಫ್ರಾಕಾಮ್ ಪ್ರೈವೇಟ್ ಲಿಮಿಟೆಡ್‌ಗೆ ನೋಟಿಸ್ ಜಾರಿ ಮಾಡಿದೆ.
ವಿಶೇಷ ಕಾರ್ಯದರ್ಶಿ ವಿನೋದ್ ಕುಮಾರ್ ಅವರು, ಪಿಡಬ್ಲ್ಯೂಡಿ ಕಾರ್ಯನಿರ್ವಾಹಕ ಎಂಜಿನಿಯರ್ ಧ್ರುವ್ ಅಗರವಾಲ್ ಮತ್ತು ಸಹಾಯಕ ಎಂಜಿನಿಯರ್ ಅನುಜ್ ದೇಶ್ವಾಲ್ ಅವರನ್ನು ಅಮಾನತುಗೊಳಿಸಲು ಆದೇಶ ಹೊರಡಿಸಿದೆ. ಕಿರಿಯ ಇಂಜಿನಿಯರ್ ಪ್ರಭಾತ್ ಕುಮಾರ್ ಪಾಂಡೆ ಅವರ ಅಮಾನತು ಆದೇಶವನ್ನು ಪಿಡಬ್ಲ್ಯೂಡಿ ಮುಖ್ಯ ಎಂಜಿನಿಯರ್ ವಿ.ಕೆ.ಶ್ರೀವಾಸ್ತವ್ ಹೊರಡಿಸಿದ್ದಾರೆ.
ಉತ್ತರಪ್ರದೇಶ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಕುಮಾರ್ ಮಿಶ್ರಾ ಅವರು ಅಯೋಧ್ಯೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆನಂದ್‌ಕುಮಾರ್ ದುಬೆ, ಸಹಾಯಕ ಎಂಜಿನಿಯರ್ ರಾಜೇಂದ್ರಕುಮಾರ್ ಯಾದವ್ ಮತ್ತು ಜೂನಿಯರ್ ಎಂಜಿನಿಯರ್ ಮೊಹಮದ್ ಶಾಹಿದ್ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ರಾಮಪಥದ ಮೇಲಿನ ಪದರವು ನಿರ್ಮಾಣವಾದ ಕೂಡಲೇ ಹಾನಿಯಾಗಿದೆ. ಇದು ರಾಜ್ಯ ಸರ್ಕಾರದ ಪ್ರಮುಖ ಆದ್ಯತೆಯಡಿ ನಡೆಯುತ್ತಿರುವ ಕಾಮಗಾರಿಯಲ್ಲಿನ ಲೋಪ ಮತ್ತು ಸಾಮಾನ್ಯ ಜನರಲ್ಲಿ ರಾಜ್ಯದ ಇಮೇಜ್‌ಗೆ ಹಾನಿಯನ್ನು ಎತ್ತಿ ತೋರಿಸುತ್ತಿದೆ ಎಂದು ಲೋಕೋಪಯೋಗಿ ಇಲಾಖೆ ಹೊರಡಿಸಿದ ಕಚೇರಿ ಆದೇಶದಲ್ಲಿ ತಿಳಿಸಲಾಗಿದೆ.
ಇದು ಗಂಭೀರ ಅಕ್ರಮವೆಂದು ಪರಿಗಣಿಸಿ, ಧ್ರುವ್ ಅಗರವಾಲ್, ಕಾರ್ಯನಿರ್ವಾಹಕ ಎಂಜಿನಿಯರ್ ನಿರ್ಮಾಣ್ ಖಂಡ್-3 ಅವರನ್ನು ಉತ್ತರಪ್ರದೇಶ ಸರ್ಕಾರಿ ನೌಕರರ ಶಿಸ್ತು ಮತ್ತು ಮೇಲ್ಮನವಿ ನಿಯಮಗಳು 1999ರ ನಿಯಮ 7ರಡಿ ಅಮಾನತುಗೊಳಿಸಲಾಗಿದೆ.
ಕಾಮಗಾರಿಯಲ್ಲಿ ನಿರ್ಲಕ್ಷ್ಯ ತೋರಿರುವ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಿಡಬ್ಲ್ಯೂಡಿ ಪ್ರಧಾನ ಕಾರ್ಯದರ್ಶಿ ಅಜಯ್ ಚೌಹಾಣ್ ತಿಳಿಸಿದ್ದಾರೆ.
Post a comment
Log in to write reviews