ಟಿ20 ಸರಣಿ: ದಕ್ಷಿಣ ಆಫ್ರಿಕಾ ವಿರುದ್ಧ ವೆಸ್ಟ್ಇಂಡೀಸ್ ಕ್ಲೀನ್ ಸ್ವೀಪ್ ಸಾಧಿಸಿದೆ
ಟರೋಬಾ (ವೆಸ್ಟ್ಇಂಡೀಸ್): ಇಲ್ಲಿನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಟಿ20 ಅಂತರರಾಷ್ಟ್ರೀಯ ಸರಣಿಯ ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 8 ವಿಕೆಟ್ ಗಳ ಸುಲಭ ಜಯ ಸಾಧಿಸುವ ಮೂಲಕ ಅತಿಥೇಯರು ಮೂರು ಪಂದ್ಯಗಳ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸಾಧಿಸಿದ್ದಾರೆ.
ಮಳೆಬಾಧಿತ ಪಂದ್ಯದಲ್ಲಿ ಶಾಯ್ ಹೋಪ್ 24 ಎಸೆತಗಳಲ್ಲಿ 42 ರನ್ ಸಿಡಿಸಿದರೆ, ನಿಕೋಲಸ್ ಪೂರನ್ 13 ಎಸೆತಗಳಲ್ಲಿ ಸಿಡಿಲಬ್ಬರದ 35 ರನ್ ಗಳಿಸಿದರು. ಡೆಕ್ ವರ್ತ್-ಲೂಯಿಸ್ ನಿಯಮದಂತೆ 13 ಓವರ್ ಗಳಲ್ಲಿ 116 ರನ್ ಗಳಿಸುವ ಪರಿಷ್ಕೃತ ಗುರಿ ಪಡೆದ ವೆಸ್ಟ್ಇಂಡೀಸ್ ತಂಡ ಕೇವಲ 9.2 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗೆಲುವಿನ ಗುರಿ ತಲುಪಿತು.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 13 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತ್ತು. ಶೆಪರ್ಡ್ ಅವರ ಶಿಸ್ತಿನ ಬೌಲಿಂಗ್ ನಿಂದಾಗಿ ದಕ್ಷಿಣ ಆಫ್ರಿಕಾ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಯಿತು. ಕೇವಲ 2 ಓವರ್ ಗಳಲ್ಲಿ 14 ರನ್ ಗಳಿಗೆ 2 ವಿಕೆಟ್ ಕಿತ್ತ ಶೆಪರ್ಡ್ ಬೌಲಿಂಗ್ ದಾಳಿಯ ಮುಂಚೂಣಿಯಲ್ಲಿದ್ದರು. ರಭಸದ ಬ್ಯಾಟಿಂಗ್ ಗೆ ಇಳಿದ ಅತಿಥೇಯ ತಂಡ 9 ಸಿಕ್ಸರ್ ಹಾಗೂ 7 ಬೌಂಡರಿ ಹೀಗೆ 82 ರನ್ ಗಳನ್ನು ಬೌಂಡರಿ ಸಿಕ್ಸರ್ಗಳ ಮೂಲಕವೇ ಗಳಿಸಿತು. ಸರಣಿಯ ಮೊದಲ ಎರಡು ಪಂದ್ಯಗಳಲ್ಲೂ ದಕ್ಷಿಣ ಆಫ್ರಿಕಾ ತಂಡ ಸೋಲು ಅನುಭವಿಸಿತ್ತು.
Post a comment
Log in to write reviews