ತಗಡೂರಿನ ವಾಂತಿ-ಭೇದಿ ಪ್ರಕರಣ : ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ ಸಚಿವರು.
ಮೈಸೂರು: ತಗಡೂರಿನಲ್ಲಿ ವಾಂತಿ-ಭೇದಿ ಪ್ರಕರಣಕ್ಕೆ ಸಂಬಂದಿಸಿದಂತೆ ಇನ್ನೂ 94 ಮಂದಿಗೆ ಚಿಕಿತ್ಸೆಮುಂದುವರೆದಿದೆ. ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ 114 ಮಂದಿ ಅಸ್ವಸ್ಥರಾಗಿದ್ದರು. ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಈಗ 114 ಮಂದಿಯಲ್ಲಿ ಮೂವರಲ್ಲಿ ಕಾಲರಾ ರೋಗ ಪತ್ತೆಯಾಗಿದೆ. ಇನ್ನುಳಿದ ರೋಗಿಗಳಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಭೇಟಿನೀಡಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯ ವಿಚಾರಿಸಿ, ಗ್ರಾಮಸ್ಥರಿಗೆ ಧೈರ್ಯ ತುಂಬಿ, ಸೂಕ್ತ ವ್ಯವಸ್ಥೆಯ ಬಗ್ಗೆ ಭರವಸೆ ನೀಡಿದ್ದಾರೆ. ನಂತರ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಮಳೆಗಾಲ ಇನ್ನು ಕಡಿಮೆಯಾಗಿಲ್ಲ ಕೂಡಲೇ ಅಧಿಕಾರಿಗಳು ಬ್ಲೀಚಿಂಗ್ ಪೌಡರ್ ಸಿಂಪಡಿಸಿ ಗ್ರಾಮದ ಎಲ್ಲಾ ಚರಂಡಿಗಳನ್ನು ಸ್ವಚ್ಛಗೊಳಿಸಿವಂತೆ ತಿಳಿಸಿದರು.
ಗ್ರಾಮದಲ್ಲಿ ಸ್ಥಗಿತಗೊಂಡಿರುವ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಪೂರ್ಣಗೊಳಿಸಿ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಬೇಕು, ಈಗಾಗಲೇ ಮೂರು ಟ್ಯಾಂಕರ್‌ಗಳಿಂದ ಶುದ್ಧ ಕುಡಿಯುವ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡಲಾಗುತ್ತಿದೆ. ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುವಂತೆ ಸಲಹೆ ನೀಡಿ ಮತ್ತು ಗ್ರಾಮಸ್ಥರಿಗೆ ಆರೋಗ್ಯ ಹದಗೆಡದಂತೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿ.ಪಂ ಸಿಇಒ ಗಾಯಿತ್ರಿ, ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್, ಗ್ರಾಪಂ ಅಧ್ಯಕ್ಷೆ ಚಂದ್ರವತಿ ಬಸವರಾಜು, ಉಪಾಧ್ಯಕ್ಷ ಗುರುಮಲ್ಲೇಶ್, ಜಿಲ್ಲಾ ಆರೋಗ್ಯ ಅಧಿಕಾರಿ ಕುಮಾರಸ್ವಾಮಿ, ಯುವ ಮುಖಂಡರಾದ ಗಾರ್ಡನ್ ಮಹೇಶ್, ಶಿವರಾಂ, ಆಸ್ಪತ್ರೆಯ ವೈದ್ಯಾಧಿಕಾರಿ ಪ್ರಭು ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
Post a comment
Log in to write reviews