ಮುಂದಿನ ತಿಂಗಳು ನಡೆಯಲಿರುವ ಭಾರತ-ಪಾಕಿಸ್ತಾನ (India vs Pakistan) ನಡುವಣ ಪಂದ್ಯಕ್ಕೆ ಉಗ್ರರು ಬೆದರಿಕೆಯೊಡ್ಡಿದ್ದಾರೆ. ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು ಲೋನ್ ವೂಲ್ಫ್ ದಾಳಿ ನಡೆಸುವುದಾಗಿ ಘೋಷಿಸಿದ್ದಾರೆ. ಈ ಬಾರಿಯ ಟಿ20 ವಿಶ್ವಕಪ್ ಅನ್ನು ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿಯಾಗಿ ಆಯೋಜಿಸುತ್ತಿದೆ. ಅದರಂತೆ ಅಮೆರಿಕದ ಮೂರು ನಗರಗಳಲ್ಲಿ ಟೂರ್ನಿ ನಡೆಯಲಿದೆ. ಅದರಲ್ಲೂ ಹೈವೋಲ್ಟೇಜ್ ಪಂದ್ಯವು ನ್ಯೂಯಾರ್ಕ್ನ ನಸ್ಸೌ ಕೌಂಟಿಯ ಐಸೆನ್‌ಹೋವರ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಈ ಪಂದ್ಯದ ವೇಳೆ ದಾಳಿ ನಡೆಸುವುದಾಗಿ ಇದೀಗ ಐಸಿಸ್-ಕೆ ಉಗ್ರ ಸಂಘಟನೆ ಷೋಷಿಸಿದೆ.
ಕೇವಲ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಮಾತ್ರ ಬೆದರಿಕೆಯೊಡ್ಡಿದ್ದು, ಇಂಡೊ-ಪಾಕ್ ಪಂದ್ಯದ ವೇಳೆ ‘ಒಂಟಿ ತೋಳ’ ದಾಳಿಯನ್ನು (ಒಬ್ಬ ದಾಳಿಕೋರ) ನಡೆಸುವಂತೆ ಬೆದರಿಕೆಯೊಡ್ಡಿದೆ. ಇದರ ಬೆನ್ನಲ್ಲೇ ಅಲರ್ಟ್ ಆಗಿರುವ ನ್ಯೂಯಾರ್ಕ್ ಪೊಲೀಸರು ನಗರದಾದ್ಯಂತ ಕಟ್ಟೆಚ್ಚರ ವಹಿಸಿದೆ. ಅಲ್ಲದೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯಕ್ಕೆ ಭಾರೀ ಭದ್ರತಾ ವ್ಯವಸ್ಥೆ ಒದಗಿಸಲಿದ್ದೇವೆ ನಸ್ಸೌ ಕೌಂಟಿಯ ಪೊಲೀಸ್ ಕಮಿಷನರ್ ಪ್ಯಾಟ್ರಿಕ್ ರೈಡರ್ ತಿಳಿಸಿದ್ದಾರೆ.
‘ನೊ ಫ್ಲೈ ಝೋನ್’:
ಉಗ್ರರು ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಕ್ರೀಡಾಂಗಣದ ಮೇಲೆ ಡ್ರೋನ್ಗಳನ್ನು ಹಾರುತ್ತಿರುವುದನ್ನು ತೋರಿಸಲಾಗಿದೆ. ಅಲ್ಲದೆ ದಿನಾಂಕ 9/06/2024 ಎಂದು ಬರೆಯಲಾಗಿದ್ದು, ಇದೇ ದಿನಾಂಕದಂದೇ ಭಾರತ ಮತ್ತು ಪಾಕಿಸ್ತಾನ್ ನಡುವೆ ಪಂದ್ಯ ನಡೆಯಲಿದೆ. ಅಂದರೆ ಈ ದಿನದಂದು ಡ್ರೋನ್ ದಾಳಿ ನಡೆಸುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ನಡುವಣ ಪಂದ್ಯ ನಡೆಯುವ ಕ್ರೀಡಾಂಗಣದ ಸುತ್ತ ಮುತ್ತ ‘ನೊ-ಫ್ಲೈ ಝೋನ್’ ಎಂದು ಘೋಷಿಸುವಂತೆ ನ್ಯೂಯಾರ್ಕ್ ಪೊಲೀಸ್ US ಏವಿಯೇಷನ್ ಅಡ್ಮಿನಿಸ್ಟ್ರೇಷನ್‌ಗೆ ವಿನಂತಿಸಿದೆ. ಈ ಮೂಲಕ ಉಗ್ರರ ದಾಳಿ ಮೇಲೆ ಕಣ್ಣಿಡಲು ಏವಿಯೇಷನ್ ಅಡ್ಮಿನಿಸ್ಟ್ರೇಷನ್ಗೆ ಮನವಿ ಮಾಡಲಾಗಿದೆ, ನಾವು ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಪಂದ್ಯವನ್ನು ವೀಕ್ಷಿಸಲು ಬರುವ ಪ್ರೇಕ್ಷಕರ ಸುರಕ್ಷತೆಯನ್ನು ಸಾಧ್ಯವಿರುವ ಎಲ್ಲ ರೀತಿಯಲ್ಲಿ ಖಚಿತಪಡಿಸಿಕೊಳ್ಳಲು ನಸ್ಸೌ ಕೌಂಟಿ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಿದೆ. ಅಲ್ಲದೆ ಭದ್ರತಾ ವ್ಯವಸ್ಥೆಗಳನ್ನು ಮತ್ತಷ್ಟು ಬಿಗಿಗೊಳಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ ಎಂದು ನ್ಯೂಯಾರ್ಕ್ನ ಗವರ್ನರ್ ಕ್ಯಾಥಿ ಹೊಚೆಲ್ ಹೇಳಿದ್ದಾರೆ.
Post a comment
Log in to write reviews