ವಿದ್ಯಾರ್ಥಿಗಳಿಗಿನ್ನೂ ಸಿಕ್ಕಿಲ್ಲಾ ಪಠ್ಯಪುಸ್ತಕ, ಶೂ, ಸಾಕ್ಸ್: ಪೋಷಕರ ಅಸಮಾಧಾನ!
ಬೆಂಗಳೂರು: ರಾಜ್ಯದಲ್ಲಿರುವ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊಂಡು, ಈ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿದೆ. ಆದರೆ ಇದುವರೆಗೂ ವಿದ್ಯಾರ್ಥಿಗಳ ಕೈ ಸೇರಿಲ್ಲ ಪಠ್ಯಪುಸ್ತಕ ಶೂ ಹಾಗೂ ಸಾಕ್ಸ್. ಕೆಲ ಭಾಗದಲ್ಲಿ ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗೆ ಬರ್ತಿದ್ದು, ಕೆಲ ವಿದ್ಯಾರ್ಥಿಗಳು ಪಠ್ಯ ಪುಸ್ತಕವೂ ಇಲ್ಲಾ ಕಲಿಕೆಯಲ್ಲಿ ಹಿಂದುಳಿಯುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಪೋಷಕರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ಶೈಕ್ಷಣಿಕ ವರ್ಷ ಆರಂಭವಾದರೂ ಶಾಲಾ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಕರ್ಯಗಳನ್ನು ಒದುಗಿಸದೇ ಇರುವುದು ಪ್ರತಿದಿನ ನಮ್ಮ ಮಕ್ಕಳು ಪರದಾಡುವಂತಾಗಿದೆ. ಇಷ್ಟು ದಿನವಾದ್ರೂ ನಮ್ಮ ಮಕ್ಕಳಿಗೆ ಶಾಲೆ ಆರಂಭದಲ್ಲಿಯೇ ಶೂ ಸಾಕ್ಸ್ ನೀಡಬೇಕಿತ್ತು ಆದ್ರೆ ಶಿಕ್ಷಣ ಇಲಾಖೆ ನಿರ್ಲಕ್ಷ್ಯವಹಿಸಿದೆ ಎಂದು ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.
2024-25ನೇ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಅಂದಾಜು 42.65 ಲಕ್ಷ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್ ಖರೀದಿಗೆ ಸರಕಾರ ಈಗಾಗಲೇ 121 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಳಪೆ ಶೂ ಪೂರೈಕೆ ಬಗ್ಗೆ ದೂರು ಬಂದಲ್ಲಿ ತಪಾಸಣೆಗೆ ಒಳಪಡಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಶೂ ಹಾಗು ಸಾಕ್ಸ್ ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನು ಆಯಾ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ವಹಿಸಲಾಗಿದೆ. ಶೂ ಹಾಗೂ ಸಾಕ್ಸ್ ಖರೀದಿಗೆ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ., 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂ. ಹಾಗೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂಪಾಯಿ ನಿಗದಿ ಮಾಡಿದೆ. ಆದ್ರೆ ಇದರ ದುಡ್ಡನ್ನ ಶಾಲೆಗೆ ನೀಡಿಲ್ಲ. ಹೀಗಾಗಿ ಶೂ ಸಾಕ್ಸ್ ಖರೀದಿಗೆ ಸೂಚನೆ ಬಂದಿದೆ. ಹಣ ಬಂದ ಮೇಲೆ ಖರೀದಿ ಮಾಡ್ತೀವಿ ಎಂದು ಶಾಲೆಗಳ ಮುಖ್ಯಸ್ಥರು ಸುಮ್ಮನಾಗಿದ್ದಾರೆ. ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯಪುಸ್ತಕ ಹಾಗೂ ಶೂ ಸಾಕ್ಸ್ ನೀಡುತ್ತೇವೆ ಅಂತ ಹೇಳಿದ್ದ ಶಿಕ್ಷಣ ಇಲಾಖೆ ಪ್ರತೀ ಬಾರಿಯಂತೆ ಈ ಬಾರಿಯೂ ವಿತರಣೆ ತಡಗೊಳಿಸಿದೆ ಎಂದು ಪೋಷಕರು ಶಿಕ್ಷಣ ಇಲಾಖೆಯ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Post a comment
Log in to write reviews