ಗ್ಯಾರಂಟಿ ವರ್ಕೌಟ್ ಆಗಿಲ್ಲ ; ಸಿದ್ದು-ಡಿಕೆಶಿ ಹೆಗಲಿಗೆ ಸೋಲಿನ ನೊಗ ಕಟ್ಟಿದ ಕೈ ಶಾಸಕರು..!
ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ 15 ರಿಂದ 20 ಸ್ಥಾನಗಳನ್ನು ಗೆಲ್ಲುವ ಭಾರೀ ಹುಮ್ಮಸ್ಸಿನಲ್ಲಿದ್ದ ರಾಜ್ಯ ಕಾಂಗ್ರೆಸ್ ಗೆ ದಕ್ಕಿದ್ದು ಮಾತ್ರ ಕೇವಲ 9 ಸ್ಥಾನಗಳು. ಇದೀಗ ಕಾಂಗ್ರೆಸ್ ಪಕ್ಷದೊಳಗೆ ಸೋಲಿನ ಜವಾಬ್ದಾರಿ ಹೊರುವವರು ಯಾರು ಎಂಬ ಪ್ರಶ್ನೆ ಉದ್ಭವಿಸಿದ್ದು, ಕೆಲ ಕಾಂಗ್ರೆಸ್ ಶಾಸನಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನತ್ತ ಕೈ ಮಾಡಿದ್ದಾರೆ.
ಫಲಿತಾಂಶದ ನಂತರ ಅನೇಕ ಕಾಂಗ್ರೆಸ್ ಶಾಸಕರ ಹೇಳಿಕೆಗಳನ್ನು ಗಮನಿಸುತ್ತಿದ್ದರೆ, ಈ ಅಂಶ ಸ್ಪಷ್ಟವಾಗುತ್ತದೆ. ಪರೋಕ್ಷವಾಗಿ ಸೋಲಿನ ಹೊಣೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೊರಬೇಕೆಂಬ ಆಗ್ರಹ ಪಕ್ಷದೊಳಗೆ ಕೇಳಿ ಬರುತ್ತಿದೆ. ತಮ್ಮ ಸ್ವಂತ ಜಿಲ್ಲೆ ಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ, ಇನ್ನೊಂದೆಡೆ ಸ್ವಂತ ತಮ್ಮನನ್ನು ಗೆಲ್ಲಿಸಿಕೊಳ್ಳಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ಗೆ ಸಾಧ್ಯವಾಗಲಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕೆಲ ಕಾಂಗ್ರೆಸ್ ಶಾಸಕರು “ನಮ್ಮ ಪಕ್ಷ ನೀಡಿರುವ ಗ್ಯಾರಂಟಿ ಯೋಜನೆಗಳು ವರ್ಕೌಟ್ ಆಗಿಲ್ಲ” ಎನ್ನುವ ಮೂಲಕ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದೀಗ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ, ಶಾಸಕರಿಗೆ ಸೂಕ್ತ ಅನುದಾನ ನೀಡುವುದು ಉತ್ತಮ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇನ್ನು ಕಾಂಗ್ರೆಸ್ ಶಾಸಕರ ಹೇಳಿಕೆಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ವಿಪಕ್ಷ ಬಿಜೆಪಿ, ಕರ್ನಾಟಕದ ಜನತೆಯ ಕಣ್ಣಿಗೆ ಅವಾಸ್ತವಿಕ ಗ್ಯಾರಂಟಿ ಎಂಬ ಮಣ್ಣೆರೆಚಿ ಅಧಿಕಾರಕ್ಕೆ ಏರಿದ್ದ ಕಾಂಗ್ರೆಸ್ ಸರ್ಕಾರ, ಈಗ ಜನರ ಕೈಗೆ ಚಿಪ್ಪು ನೀಡಲು ಭರ್ಜರಿಯಾಗಿಯೇ ಸ್ಕೆಚ್ ಹಾಕುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಆದ ಹಿನ್ನಡೆಯನ್ನು ಪರಿಗಣಿಸಿ, ಗ್ಯಾರಂಟಿಗಳನ್ನು ನಿಲ್ಲಿಸಿ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿರುವುದು ಮತ ನೀಡಿದ ಕರ್ನಾಟಕದ ಜನತೆಗೆ ಮಾಡುತ್ತಿರುವ ಮಹಾದ್ರೋಹ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಗ್ಯಾರಂಟಿಗಳಿಂದ, ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವವರೆಗೂ ಗ್ಯಾರಂಟಿಗಳನ್ನು ಮುಂದುವರೆಸಬೇಕು. ಸಿಎಂ ಸಿದ್ದರಾಮಯ್ಯ ಅವರೇ, ಒಂದು ವೇಳೆ ಕುಂಟು ನೆಪವೊಡ್ಡಿ ಗ್ಯಾರಂಟಿಗಳನ್ನು ನಿಲ್ಲಿಸಿದರೆ, ಜನ ನಿಮ್ಮ ಸರ್ಕಾರವನ್ನು ಅಡ್ರೆಸ್ ಇಲ್ಲದ ಹಾಗೆ ಮಾಡುವುದಂತೂ ಖಚಿತ-ನಿಶ್ಚಿತ-ಖಂಡಿತ ಎಂದು ಟೀಕಿಸಿದೆ.
Post a comment
Log in to write reviews