ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಮಳೆ ಆರ್ಭಟ (Karnataka Rain) ನಿಲ್ಲುವಂತೆ ಕಾಣುತ್ತಿಲ್ಲ. ವರುಣಾರ್ಭಟಕ್ಕೆ ಮನೆಯ ಮೇಲೆ ಭೂ ಕುಸಿತ ಉಂಟಾಗಿದೆ. ಮನೆಯ ಹಿಂಬದಿಯ ಗುಡ್ಡ ಕುಸಿದು ಸಂಪೂರ್ಣ ಹಾನಿಯಾಗಿದೆ. ಕಳಸ ತಾಲೂಕಿನ ಸಂಸೆ ಗ್ರಾ.ಪಂ ವ್ಯಾಪ್ತಿಯ ಕುನ್ನಿ ಹಳ್ಳ ಗ್ರಾಮದಲ್ಲಿ ಘಟನೆ ನಡೆದಿದೆ. ಮನೆಯಲ್ಲಿ ಮಲಗಿದ್ದಾಗ ಹಾಸಿಗೆಗೆ ನೀರು ಬಂದಾಗ ಕುಟುಂಬಸ್ಥರು ಎಚ್ಚರಗೊಂಡು, ಗುಡ್ಡ ಕುಸಿತದ ಶಬ್ದಕ್ಕೆ ಮನೆಯಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ. ಮನೆಯ ಗೋಡೆ ಕುಸಿದು ಬಿದ್ದು ಅವಾಂತರವೇ ಸೃಷ್ಟಿಯಾಗಿದೆ. ಮನೆ ಬಿರುಕು ಬಿಟ್ಟಿದ್ದು, ಅಧಿಕಾರಿಗಳಿಗೆ ವಿಷಯ ಮುಟ್ಟಿಸಲು ನೆಟ್‌ವರ್ಕ್ ಇಲ್ಲದೆ ಪರದಾಡುತ್ತಿದ್ದಾರೆ.
ಇನ್ನೂ ಧರೆ ಕುಸಿದು 50 ಗಂಟೆ ಕಳೆದರೂ ಮಣ್ಣು ತೆರವಾಗಿಲ್ಲ. ಇದರಿಂದಾಗಿ ಕಲ್ಗುಡ್ಡೆ, ಹೊರನಾಡು, ಮೆಣಸಿನ ಹಾಡ್ಯ ರಸ್ತೆ ಬಂದ್ ಆಗಿದೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕೊಗ್ರೆ, ಸಾತ್ ಕೊಡಿಗೆ ಸಮೀಪ ಎರಡು ದಿನದ ಹಿಂದೆ ರಸ್ತೆಗೆ ಗುಡ್ಡ ಕುಸಿದು ರಸ್ತೆ ಸಂಚಾರ ಬಂದ್ ಆಗಿತ್ತು. ರಸ್ತೆ ಮೇಲೆ ಮತ್ತಷ್ಟು ಗುಡ್ಡದ ಮಣ್ಣು ಕುಸಿಯುತ್ತಿದ್ದು, ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.
ರಣ ಭೀಕರ ಮಳೆಗೆ ಕಳಸ ತಾಲೂಕಿನ ಹೊರನಾಡು ಬಳಿ ಇರುವ ಸಿಮೆಂಟ್ ರಸ್ತೆ ಕೊಚ್ಚಿಹೋಗಿದೆ. ಹೊರನಾಡಿನಿಂದ ಹಲವು ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ರಸ್ತೆಯಲ್ಲಿದ್ದ ತಡೆಗೋಡೆ ಪೈಪ್ ಎಲ್ಲವೂ ನೀರುಪಾಲಾಗಿದೆ. ಇತ್ತ ತುಂಗಾ ನದಿ ಅಬ್ಬರಕ್ಕೆ ಶೃಂಗೇರಿ ನಲುಗಿದೆ. ನದಿ ತಟದ ತೋಟಗಳು, ರಸ್ತೆ ಎಲ್ಲವೂ ಮುಳುಗಡೆಯಾಗಿದೆ. ಪಟ್ಟಣದ ಮುಖ್ಯ ಭಾರತಿ ತೀರ್ಥ ರಸ್ತೆಯನ್ನು ನೀರು ಸಂಪೂರ್ಣ ಆವರಿಸಿದೆ.
Post a comment
Log in to write reviews