ಹುಬ್ಬಳ್ಳಿಯಲ್ಲಿ ನಿರಂತರ ಮಳೆಯಿಂದ ಹಳ್ಳ - ಕೊಳ್ಳಗಳು ಮಿತಿ ಮೀರಿ ಹರಿಯುತ್ತಿದ್ದು, ಸೇತುವೆ ಮೇಲೆ ತುಂಬಿ ಹರಿಯುತ್ತಿರುವ ಹಳ್ಳದ ನೀರನ್ನು ಲೆಕ್ಕಿಸದೇ ಕಾರು ಚಲಾಯಿಸಿದ ವ್ಯಕ್ತಿಯೊಬ್ಬ ವಾಹನ ಸಮೇತ ಕೊಚ್ಚಿಕೊಂಡು ಹೋದರೂ ಬದುಕುಳಿದಿದ್ದಾರೆ. ಪುಡಕಲಕಟ್ಟಿ ಗ್ರಾಮದ ನಾಗರಾಜ ದೇವಣ್ಣವರ ಎಂಬುವವರೇ ಬದುಕುಳಿದವರು. ಕಲಘಟಗಿ ತಾಲೂಕಿನ ಬೇಗೂರು ಬಿಸರಳ್ಳಿ ಹಾಗೂ ಹಿರೇಹೊನ್ನಿಹಳ್ಳಿ ಗ್ರಾಮ ಸಂಪರ್ಕಿಸುವ ಮಧ್ಯಭಾಗದಲ್ಲಿರುವ ಬೇಡ್ತಿ ಸೇತುವೆ ಅತಿ ಕೆಳಮಟ್ಟದಲ್ಲಿದೆ. ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿ ರಸ್ತೆ ಮೇಲೂ ಹರಿಯುತ್ತಿದೆ.
ಬೇಗೂರು ಗ್ರಾಮದ ಸಂಬಂಧಿಕರ ಮನೆಗೆ ನಾಗರಾಜ ದೇವಣ್ಣವರ ಹೋಗಿದ್ದು, ಪುಡಕಲಕಟ್ಟಿಗೆ ಮರಳಿ ಬರುವಾಗ ಬೇಡ್ತಿ ಸೇತುವೆ ಮೇಲೆ ಹರಿಯುತ್ತಿರುವ ನೀರಿನ ಹರಿವನ್ನು ಲೆಕ್ಕಿಸದೇ ಕಾರು ಚಲಾಯಿಸಿಕೊಂಡು ಹೊರಟಿದ್ದಾರೆ. ಸೇತುವೆ ಮಧ್ಯಭಾಗಕ್ಕೆ ಬರುವಷ್ಟರಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ಕಾರು ಸಹಿತ ಕೊಚ್ಚಿಕೊಂಡು ಹೋಗಿದ್ದಾರೆ. ನಾಗರಾಜ ಅವರು ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲೂ ಸಮಯ ಪ್ರಜ್ಞೆ ಉಪಯೋಗಿಸಿದ ಕೂಡಲೇ ಕಾರಿನಿಂದ ಹೊರಜಿಗಿದು ಪಕ್ಕದಲ್ಲಿರುವ ಮರದ ಬೇರು ಹಿಡಿದುಕೊಂಡು, ಮರವನ್ನೇರಿ ಕೊಂಬೆ ಮೇಲೆ ಕುಳಿತು ಸಹಾಯಕ್ಕಾಗಿ ಕೂಗಿದ್ದಾರೆ.
ಅವರ ಧ್ವನಿ ಕೇಳಿದ ಬಸವರಾಜ ದೇಸೂರ ಎಂಬುವರು ರಾತ್ರಿ 11.30ರ ಸುಮಾರಿಗೆ ಸ್ಥಳಕ್ಕೆ ಧಾವಿಸಿ ವಿಷಯ ತಿಳಿದುಕೊಂಡು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಕಲಘಟಗಿ ಅಗ್ನಿಶಾಮಕ ದಳದ ಸಿಬ್ಬಂದಿ 2 ಗಂಟೆ ಕಾರ್ಯಚರಣೆ ಕೈಗೊಂಡು ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ಅಗ್ನಿಶಾಮಕ ಸಹಾಯಕ ಠಾಣಾಧಿಕಾರಿ ಅಶೋಕ ವಡ್ಡರ, ಥಾವರು ರಾಠೋಡ್, ಉಮೇಶ ತೆಂಬದ, ಎಸ್. ಕಿರಣಕುಮಾರ, ಮಹಾಂತೇಶ ಜೋಡಿಗೇರ, ಸಾಯಿರಾಮ ಸಿಂಧೆ, ನಿಖಿಲ್ ಎನ್. ಇತರರು ಸ್ಥಳೀಯರ ನೆರವಿನಿಂದ ರಕ್ಷಿಸಿದವರು.
Post a comment
Log in to write reviews