ರಾಂಚಿ: ದೇಶದಲ್ಲಿ ರೈಲು ಅಪಘಾತಗಳ ಸಂಖ್ಯೆ ಹೆಚ್ಚಾಗತೊಡಗಿದ್ದು, ಮಂಗಳವಾರ(ಜುಲೈ 30) ಜಾರ್ಖಂಡ್‌ನಲ್ಲಿ ನಡೆದ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದು, ಕನಿಷ್ಠ 20 ಮಂದಿಗೆ ಗಾಯಗಲಾಗಿವೆ ಎನ್ನಲಾಗಿದೆ.
ಜಾರ್ಖಂಡ್‌ನ ಚರಧರ್‌ಪುರ ವಿಭಾಗದ ಸೆರೈಕೆಲಾ-ಖರ್ಸಾವನ್ ಜಿಲ್ಲೆಯ ರಾಜ್ಖರ್ಸ್ವಾನ್ ವೆಸ್ಟ್ ಔಟರ್ ಮತ್ತು ಬಾರಾಬಂಬೂ ನಡುವೆ ಇಂದು ಮುಂಜಾನೆ 12810 ನಂಬರ್‌ನ ಹೌರಾ-ಮುಂಬೈ ಮೇಲ್ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿ ಈ ದುರಂತ ಸಂಭವಿಸಿದೆ. ಕೂಡಲೇ ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು, ರಕ್ಷಣಾ ತಂಡಗಳು ಧಾವಿಸಿದ್ದು ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. (Train Accident).
ರೈಲಿನ ನಾಲ್ಕು ಸಾಮಾನ್ಯ ಬೋಗಿಗಳನ್ನು ಹೊರತುಪಡಿಸಿ ಉಳಿದೆಲ್ಲ 18 ಬೋಗಿಗಳು ಹಳಿ ತಪ್ಪಿವೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಸೆರೈಕೆಲಾ-ಖಾರ್ಸಾವನ್ ಜಿಲ್ಲಾಧಿಕಾರಿ ರವಿಶಂಕರ್ ಶುಕ್ಲಾ ಸೇರಿದಂತೆ ಅನೇಕ ಹಿರಿಯ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪ್ರಾಥಮಿಕ ವರದಿಯ ಪ್ರಕಾರ ಎದುರುಗಡೆಯಿಂದ ಬರುತ್ತಿದ್ದ ಗೂಡ್ಸ್ ರೈಲು ಹಳಿತಪ್ಪಿದ್ದು, ಇದಕ್ಕೆ ಹೌರಾ-ಮುಂಬೈ ಮೇಲ್ ಎಕ್ಸ್‌ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಹೌರಾ ಮೇಲ್ ಪಶ್ಚಿಮ ಬಂಗಾಳದ ಹೌರಾದಿಂದ ಮುಂಬೈಗೆ ಪ್ರಯಾಣಿಸುತ್ತಿತ್ತು.
”ಘಟನೆಯಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಗ್ಯಾಸ್ ಕಟ್ಟರ್ ಸಹಾಯದಿಂದ ಬೋಗಿಯನ್ನು ಕತ್ತರಿಸಿದ ನಂತರ ಅವರ ಶವಗಳನ್ನು ಹೊರ ತೆಗೆಯಲಾಗಿಗಿದೆ. ಸುಮಾರು 15-20 ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಪೈಕಿ 4-5 ಮಂದಿಯ ಸ್ಥಿತಿ ಗಂಭೀರವಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲವು ರೈಲುಗಳು ರದ್ದು
ಈ ಅಪಘಾತದಿಂದಾಗಿ ಹಲವು ರೈಲುಗಳು ರದ್ದಾಗಿವೆ, ಕೆಲವು ರೈಲುಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಖರಗ್ಪುರ-ಧನ್ಬಾದ್ ಎಕ್ಸ್‌ಪ್ರೆಸ್, ಹೌರಾ-ಬಾರ್ಬಿಲ್ ಎಕ್ಸ್‌ಪ್ರೆಸ್, ಅಸನ್ಸೋಲ್-ಟಾಟಾ ಎಕ್ಸ್‌ಪ್ರೆಸ್, ಇಸ್ಪತ್ ಎಕ್ಸ್‌ಪ್ರೆಸ್, ಖರಗ್ಪುರ-ಜಾರ್ಗ್ರಾಮ್-ಧನ್ಬಾದ್ ಎಕ್ಸ್‌ಪ್ರೆಸ್, ಹೌರಾ-ಬಾರ್ಬಿಲ್ ಜನಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಶಾಲಿಮಾರ್-ಎಲ್ಟಿಟಿ ಎಕ್ಸ್‌ಪ್ರೆಸ್ ರೈಲುಗಳನ್ನು ರದ್ದುಪಡಿಸಲಾಗಿದೆ. ಹೌರಾ-ಸಿಎಸ್ಎಂಟಿ ಡುರಾಂಟೊ ಎಕ್ಸ್‌ಪ್ರೆಸ್, ಹೌರಾ-ಪುಣೆ ಎಕ್ಸ್‌ಪ್ರೆಸ್ ಮತ್ತು ಪುರಿ-ರಿಷಿಕೇಶ್ ಎಕ್ಸ್‌ಪ್ರೆಸ್ ರೈಲುಗಳು ಬೇರೆ ಮಾರ್ಗದಲ್ಲಿ ಸಂಚರಿಸಲಿವೆ.
Post a comment
Log in to write reviews