ತುಂಗಭದ್ರಾ ಡ್ಯಾಂ ಗೇಟ್ ಮುರಿದ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ, ರೈತರ ಹಿತ ಮುಖ್ಯ : ಸಿದ್ದರಾಮಯ್ಯ
ಕೊಪ್ಪಳ: ತುಂಗಭದ್ರಾ ಜಲಾಶಯದ ನಿರ್ವಹಣೆಯ ಜವಾಬ್ದಾರಿ ತುಂಗಭದ್ರಾ ಮಂಡಳಿಗೆ ಸೇರಿರುತ್ತದೆ. ಆದರೆ, ಈ ವಿಷಯದಲ್ಲಿ ನಾನು ಯಾರನ್ನೂ ದೂಷಿಸುವುದಿಲ್ಲ. ಜಲಾಶಯದಲ್ಲಿ 19ನೇ ಕ್ರಸ್ಟ್ ಗೇಟ್ ತುಂಡಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ರಾಜಕೀಯ ಮಾಡುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡುವ ಮುನ್ನ ಕೊಪ್ಪಳದಲ್ಲಿ ಸುದ್ದಿಗಾರ ಜೊತೆ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸುತ್ತಾರೆ. ಬಿಜೆಪಿಯವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಅಷ್ಟೇ. ಅದಕ್ಕೆಲ್ಲ ನಾನು ಉತ್ತರ ಕೋಡೋದಕ್ಕೆ ಹೋಗೋದಿಲ್ಲ. ಈಗ ತುಂಗಭದ್ರಾ 19ನೇ ಗೇಟ್ ತುಂಡಾಗಿದೆ. ಇದರಲ್ಲಿ ರಾಜ್ಯ ಸರಕಾರದ ಹೊಣೆಗೇಡಿತನ ಅಂದ್ರೆ ಏನರ್ಥ ಎಂದು ಪ್ರಶ್ನಿಸಿದ್ದಾರೆ.
ಇದು ರಾಜಕೀಯ ಮಾಡುವ ವಿಷಯವಲ್ಲ, ನಾವು ಘಟನೆಗೆ ಅವರು ಹೊಣೆ, ಇವರು ಹೊಣೆ ಎಂದು ಆರೋಪ ಮಾಡುತ್ತಾ ಕೂರುವುದಿಲ್ಲ. ನಮಗೆ ರಾಜಕೀಯಕ್ಕಿಂತ ನಾಡಿನ ರೈತರ ಹಿತ ಮುಖ್ಯ ಎಂದರು.
ಇದರ ನೇರ ಹೊಣೆ ಟಿಬಿ ಬೋರ್ಡ್ನದ್ದು. ಆದರೂ ಇದರಲ್ಲಿ ನಾನು ಯಾರು ತಪ್ಪು ಮಾಡಿದ್ದಾರೆ ಎಂಬುದನ್ನು ಹೇಳಲು ಹೋಗುವುದಿಲ್ಲ. ಸದ್ಯ ರೈತರ ಹಿತ ಕಾಯುವುದು ಮೊದಲ ಆದ್ಯತೆ. ತುಂಗಭದ್ರಾ ಮಂಡಳಿಯ ನೇತೃತ್ವವನ್ನು ಭಾರತ ಸರ್ಕಾರ ನೇಮಿಸಿದ ಅಧ್ಯಕ್ಷರು ನಿರ್ವಹಿಸುತ್ತಾರೆ. ಆಂಧ್ರ, ಕರ್ನಾಟಕ, ತೆಲಂಗಾಣ ರಾಜ್ಯದ ಸದಸ್ಯರು ಮಂಡಳಿಯಲ್ಲಿರುತ್ತಾರೆ ಎಂದು ಹೇಳಿದರು.
Post a comment
Log in to write reviews