ಮಕ್ಕಳ ತಟ್ಟೆಯಲ್ಲಿ ಮೊಟ್ಟೆ ಇಟ್ಟು ಫೋಟೋ ತೆಗೆದ ಬಳಿಕ ತಟ್ಟೆಯಿಂದ ಮೊಟ್ಟೆಯನ್ನು ತೆಗೆದುಕೊಳ್ಳುವ ಅಂಗನವಾಡಿ ಕಾರ್ಯಕರ್ತೆಯರು. ಈ ಘಟನೆ ಕೊಪ್ಪಳದಲ್ಲಿ ನಡೆದಿದ್ದು. ಕಾರ್ಯಕರ್ತೆ ಹಾಗೂ ಸಹಾಯಕಿ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆಯರು ಮಕ್ಕಳಿಗೆ ಕೊಡುವ ಮೊಟ್ಟೆಯಲ್ಲಿ ವಂಚನೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು. ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಲೆತಗ್ಗಿಸುವಂತ ಕೆಲಸ ಮಾಡಿದ್ದಾರೆ. ಮಕ್ಕಳಿಗೆ ಮೊಟ್ಟೆ ಕೊಟ್ಟು ಬಾಯಿಗೆ ಹಾಕಿಕೊಳ್ಳುವ ಮುಂಚೆನೇ ಕಾರ್ಯಕರ್ತರು ಮರಳಿ ಮೊಟ್ಟೆ ಕಸಿದುಕೊಂಡಿದ್ದಾರೆ. ಇದನ್ನು ತಿಳಿದ ಮೇಲಾಧಿಕಾರಿಗಳು ಕಾರ್ಯಕರ್ತೆ ಮತ್ತು ಸಹಾಯಕಿಯನ್ನು ಅಮಾನತು ಮಾಡಿದ್ದಾರೆ.
ಇನ್ನು ಕೊಪ್ಪಳ ಜಿಲ್ಲೆಯ ಅಂಗನವಾಡಿಗಳಲ್ಲಿ ಅವ್ಯವಸ್ಥೆ ಮತ್ತು ಅಕ್ರಮ ಹೆಚ್ಚಾಗಿದ್ದು ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ಸಿ.ಚಂದ್ರಶೇಖರ ನೇತೃತ್ವದಲ್ಲಿ ನ್ಯಾಯಾಧೀಶರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಅಂಗನವಾಡಿ ಅಕ್ರಮ ಕಂಡು ಸ್ವತ ನ್ಯಾಯಾಧೀಶರು ಶಾಕ್ ಆಗಿದ್ದಾರೆ. ಕಳೆದ ಒಂದು ವಾರದಲ್ಲಿ 53 ಅಂಗನವಾಡಿಗಳಿಗೆ ನ್ಯಾಯಾಧೀಶರು ಭೇಟಿ ನೀಡಿದ್ದಾರೆ. ನ್ಯಾಯಾಧೀಶರ ಭೇಟಿ ಸಮಯದಲ್ಲಿ ಅನೇಕ ಅಕ್ರಮ, ಅವ್ಯವಸ್ಥೆ ಕಂಡುಬಂದಿದೆ. ಬಹುತೇಕ ಅಂಗನವಾಡಿಗಳಲ್ಲಿ ಸ್ವಚ್ಚತೆಯೇ ಮರೆಯಾಗಿದೆ. ಬಹಳಷ್ಟು ಅಂಗನವಾಡಿಗಳಲ್ಲಿ ಶೌಚಾಲಯವೇ ಇಲ್ಲ, ಇದ್ರೂ ಕೂಡ ಬಾಗಿಲುಗಳೇ ಇಲ್ಲ.
ಆಹಾರ ಸಾಮಾಗ್ರಿಗಳಲ್ಲಿ ನುಸಿ, ಹುಳುಗಳು ಇರೋದು ಪತ್ತೆಯಾಗಿದೆ. ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡ್ತಿರೋದು ಪತ್ತೆಯಾಗಿದೆ. ದಾಖಲಾತಿಗಳನ್ನು ಪೆನ್ಸಿಲ್ ನಲ್ಲಿ ಬರೆದು ಕಳ್ಳಾಟವಾಡಲಾಗುತ್ತಿದೆ. ನಂತರ ತಮಗೆ ತಾಳೆ ಆಗೋ ಹಾಗೆ ಪೆನ್ ನಲ್ಲಿ ಬರೆಯುತ್ತಿದ್ದಾರೆ. ನಮ್ಮ ಅಧಿಕಾರಿಗಳು ಹೇಳಿದ್ದರಿಂದಲೇ ಪೆನ್ಸಿಲ್ ನಲ್ಲಿ ಬರೆಯುತ್ತೇವೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಅವಧಿ ಮೀರಿದ ಆಹಾರ ಪೂರೈಕೆ ಮಾಡ್ತಿರೋದು ಕೂಡಾ ಪತ್ತೆಯಾಗಿದೆ. ಅಂಗನವಾಡಿಯಲ್ಲಿರಬೇಕಾದ ಫಸ್ಟ್ ಏಡ್ ಕಿಟ್ ಗಳು ಅಂಗನವಾಡಿ ಕಾರ್ಯಕರ್ತೆಯರ ಮನೆಯಲ್ಲಿರೋದು ಪತ್ತೆಯಾಗಿದೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಈ ಬಗ್ಗೆ ಮಾಹಿತಿ ನೀಡೋದಾಗಿ ನ್ಯಾಯಾಧೀಶರು ತಿಳಿಸಿದ್ದಾರೆ.
Post a comment
Log in to write reviews