ನವದೆಹಲಿ: ಯುಜಿಸಿ-ಎನ್ಇಟಿ (ವಿಶ್ವವಿದ್ಯಾಲಯ ಅನುದಾನ ಆಯೋಗ – ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಪರೀಕ್ಷೆ ನಡೆದ ಮರುದಿನವೇ ರದ್ದುಗೊಳಿಸಿ ಆದೇಶ ಹೊರಡಿಸಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಈ ನಿರ್ಧಾರಕ್ಕೆ ಇದೀಗ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ.
ಜೂನ್ 18ರಂದು ನಡೆದ ಎನ್ಇಟಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದ ನಂತರ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಈ ನಿರ್ಧಾರ ತೆಗೆದುಕೊಂಡಿದೆ. ಈ ಪರೀಕ್ಷೆಯನ್ನು ದೇಶದಾದ್ಯಂತ 317 ನಗರಗಳಲ್ಲಿ 1205 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿದ್ದು, 11 ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಇನ್ನು ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು UGC-NET ಜೂನ್ 2024 ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದೇವೆ ಎಂದು ಶಿಕ್ಷಣ ಸಚಿವಾಲಯವು ಹೇಳಿದೆ. ಅಕ್ರಮದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲಾಗಿದೆ ಎಂಬುದಾಗಿ NTA ಹೇಳಿಕೆಯಲ್ಲಿ ಹೇಳಿದೆ.
ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಅಥವಾ ಜೂನಿಯರ್ ರಿಸರ್ಚ್ ಫೆಲೋಶಿಪ್ ಹುದ್ದೆಗೆ ಅರ್ಹತೆಯನ್ನು ನಿರ್ಧರಿಸಲು ಯುಜಿಸಿ-ಎನ್ಇಟಿ ಪರೀಕ್ಷೆಯನ್ನು ನಡೆಸಲಾಗುತ್ತದೆ.
ವಿಪಕ್ಷಗಳ ಆಕ್ರೋಶ : ಯುಜಿಸಿ-ಎನ್ಇಟಿ ಪರೀಕ್ಷೆಯನ್ನು ರದ್ದುಗೊಳಿಸಿರುವುದನ್ನು ವಿಪಕ್ಷ ಕಾಂಗ್ರೆಸ್ ಖಂಡಿಸಿದ್ದು, ಕೇಂದ್ರ ಸರ್ಕಾರ ಭವಿಷ್ಯದ ಕನಸು ಹೊತ್ತಿದ್ದ ದೇಶದ ಯುವ ಸಮುದಾಯಕ್ಕೆ ಮಹಾ ದ್ರೋಹ ಎಸಗುತ್ತಲೇ ಬಂದಿದೆ, ಒಂದೇ ಒಂದು ಪರೀಕ್ಷೆಯನ್ನು ಸಮರ್ಥವಾಗಿ, ನ್ಯಾಯಯುತವಾಗಿ ನಡೆಸಲು ಸಾಧ್ಯವಾಗದಿರುವುದು ಕೇಂದ್ರ ಸರ್ಕಾರದ ಅಸಾಮರ್ಥ್ಯಕ್ಕೆ ಕನ್ನಡಿ. ನೀಟ್ ಪರೀಕ್ಷೆಯ ನಂತರ ನೆಟ್ ಪರೀಕ್ಷೆಯಲ್ಲೂ ವ್ಯಾಪಕ ಹಗರಣ ನಡೆದಿರುವುದು ಬೆಳಕಿಗೆ ಬಂದಿದೆ, ಪದವಿ ಕಾಲೇಜು ಪ್ರಾಧ್ಯಾಪಕರ ನೇಮಕಕ್ಕೆ ನಡೆದ ನೆಟ್ ಪರೀಕ್ಷೆಯನ್ನು ರದ್ದು ಮಾಡುವ ಮೂಲಕ ಕೇಂದ್ರ ಸರ್ಕಾರ ಮತ್ತೊಂದು ಹಗರಣವನ್ನು ಒಪ್ಪಿಕೊಂಡಿದೆ. ಪ್ರಾಮಾಣಿಕ ಪರೀಕ್ಷೆ ನಡೆಸದೆ ರದ್ದು ಮಾಡುವ ಮೂಲಕ 9 ಲಕ್ಷ ಅಭ್ಯರ್ಥಿಗಳ ಕನಸನ್ನು ಛಿದ್ರಗೊಳಿಸಿದೆ ಕೇಂದ್ರ ಸರ್ಕಾರ. ನೀಟ್, ನೆಟ್ ಪರೀಕ್ಷೆಗಳಲ್ಲಿ ಒಟ್ಟು 35 ಲಕ್ಷ ಜನರ ಬದುಕು ಅತಂತ್ರವಾಗಿದೆ, ಇದರ ಹೊಣೆ ಹೊರುವವರು ಯಾರು? ಯಾರೊಬ್ಬರೂ ನೈತಿಕ ಹೊಣೆಗಾರಿಕೆ ಪ್ರದರ್ಶಿಸುತ್ತಿಲ್ಲವೇಕೆ? ಎಂದು ಪ್ರಶ್ನಿಸಿದೆ.
Post a comment
Log in to write reviews