ನವದೆಹಲಿ: ಪಠ್ಯಪುಸ್ತಕದಲ್ಲಿ “ಭಾರತ್” ಮತ್ತು “ಇಂಡಿಯಾ” ಎರಡೂ ಪದಗಳನ್ನು ದೇಶದಲ್ಲಿ ಬಳಕೆಯಲ್ಲಿದೆ ಎಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ ಸಂಸ್ಥೆ ನಿರ್ದೇಶಕ ದಿನೇಶ್ ಪ್ರಸಾದ್ ಸಕ್ಲಾನಿ ಹೇಳಿದ್ದಾರೆ.
ನಮ್ಮ ಸಂವಿಧಾನ ಏನು ಹೇಳುತ್ತದೆಯೋ ಅದು ನಮ್ಮ ನಿಲುವು ಮತ್ತು ನಾವು ಅದನ್ನು ಬೆಂಬಲಿಸುತ್ತೇವೆ. ಈ ಬಗ್ಗೆ ಯಾವುದೇ ರೀತಿಯ ವಿಷಯ ಚರ್ಚೆಯಲ್ಲಿಲ್ಲ. ಸದ್ಯ ಭಾರತ ಅಥವಾ ಇಂಡಿಯಾ ಎರಡೂ ಪದಗಳನ್ನು ಬಳಸುತ್ತೇವೆ ಎಂದು ಹೇಳಿದ್ದಾರೆ.
ಭಾರತ ಅಥವಾ ಇಂಡಿಯಾ ಎಂಬುದು ಚರ್ಚಾಸ್ಪದ ವಿಷಯವೇ ಅಲ್ಲ. ಕಳೆದ ವರ್ಷ, ಶಾಲಾ ಪಠ್ಯಕ್ರಮವನ್ನು ಪರಿಷ್ಕರಿಸಲು NCERT ರಚಿಸಿದ ಸಾಮಾಜಿಕ ವಿಜ್ಞಾನದ ಉನ್ನತ ಮಟ್ಟದ ಸಮಿತಿಯು ಎಲ್ಲಾ ತರಗತಿಗಳ ಪಠ್ಯಪುಸ್ತಕಗಳಲ್ಲಿ ಇಂಡಿಯಾ ಬದಲಿಗೆ “ಭಾರತ್” ಅನ್ನು ಬಳಸಬೇಕೆಂದು ಶಿಫಾರಸು ಮಾಡಿತ್ತು. ಆದರೆ ಸಿ.ಐ.ಐಸಾಕ್ ನೇತೃತ್ವದ ಸಮಿತಿಯು “ಪ್ರಾಚೀನ ಇತಿಹಾಸ” ಬದಲಿಗೆ “ಶಾಸ್ತ್ರೀಯ ಇತಿಹಾಸ”ವನ್ನು ಪರಿಚಯಿಸಲು ಮತ್ತು ಎಲ್ಲಾ ವಿಷಯಗಳ ಪಠ್ಯಕ್ರಮದಲ್ಲಿ ಭಾರತೀಯ ಜ್ಞಾನ ವ್ಯವಸ್ಥೆಯನ್ನು ಸೇರಿಸಲು ಸಲಹೆ ನೀಡಿತ್ತು. ಜೊತೆಗೆ ಎಲ್ಲಾ ತರಗತಿಗಳ ಪಠ್ಯಪುಸ್ತಕಗಳಲ್ಲಿ ಭಾರತ್ ಹೆಸರನ್ನು ಬಳಸಬೇಕೆಂದು ಸಮಿತಿಯು ಶಿಫಾರಸು ಮಾಡಿತ್ತು. ಮುಂದುವರೆದು ಭಾರತ ಎಂಬುದು ಬಹಳ ಹಳೆಯ ಹೆಸರು. 7,000 ವರ್ಷಗಳಷ್ಟು ಹಳೆಯದಾದ ವಿಷ್ಣು ಪುರಾಣದಂತಹ ಪ್ರಾಚೀನ ಗ್ರಂಥಗಳಲ್ಲಿ ಭಾರತ ಎಂಬ ಹೆಸರನ್ನು ಬಳಸಲಾಗಿದೆ ಎಂಬ ಉದಾಹರಣೆಗಳನ್ನು ನೀಡಿತ್ತು.
ಈ ಕುರಿತು ಪ್ರತಿಕ್ರಿಯೆ ನೀಡಿದ್ದ NCERT, ಸಮಿತಿಯ ನೀಡಿರುವ ಶಿಫಾರಸುಗಳ ಬಗ್ಗೆ ಯಾವುದೇ ನಿರ್ಧಾರವನ್ನು ಇದುವರೆಗು ತೆಗೆದುಕೊಂಡಿಲ್ಲ ಎಂಬುದಾಗಿ ತಿಳಿಸಿತ್ತು. ಕಳೆದ ವರ್ಷ ಕೇಂದ್ರ ಸರ್ಕಾರವು ಜಿ 20 ಶೃಂಗ ಸಭೆ ಆಹ್ವಾನದ ಸಂದರ್ಭದಲ್ಲಿ ಪ್ರೆಸಿಡೆಂಟ್ ಆಫ್ ಇಂಡಿಯಾ ಬದಲು ಪ್ರೆಸಿಡೆಂಟ್ ಆಫ್ ಭಾರತ ಎಂದು ಮುದ್ರಿಸಿತ್ತು. ಅಲ್ಲದೇ ಅದೇ ಜಿ 20 ಶೃಂಗಸಭೆಯಲ್ಲಿ, ಪ್ರಧಾನಿ ನರೇಂದ್ರ ಮೋದಿಯವರ ನಾಮಫಲಕದ ಮೇಲೆ ‘ಇಂಡಿಯಾ’ ಬದಲಿಗೆ ‘ಭಾರತ’ ಎಂದು ಬರೆಯಲಾಗಿತ್ತು. ಆ ಮೂಲಕ ಭಾರತ ಎಂಬ ಹೆಸರು ಅಧಿಕೃತವಾಗಿ ಬಳಕೆಗೆ ತರಲು ಮುಂದಾಗಿತ್ತು. ಈ ಎಲ್ಲಾ ಬೆಳವಣಿಗೆಗಳು ದೇಶದಲ್ಲಿ ಹೆಚ್ಚಾಗಿ ಚರ್ಚೆಗೆ ಬಂದಿತ್ತು.
Post a comment
Log in to write reviews