ಬೆಂಗಳೂರು: ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾದ ಆರೋಪಕ್ಕೆ ಗುರಿಯಾಗಿರುವ ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ನೀಡುವುದಾಗಿ ಗುರುವಾರ ಘೋಷಿಸಿದ್ದಾರೆ.
ವಿಧಾನ ಸೌಧದಲ್ಲಿ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ವ-ಇಚ್ಛೆಯಿಂದ ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.. ಸಂಜೆ 7.30ಕ್ಕೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ರಾಜೀನಾಮೆ ನೀಡುತ್ತೇನೆ. ನನ್ನ ರಾಜೀನಾಮೆಗೆ ಯಾರ ಒತ್ತಡವೂ ಇಲ್ಲ. ಪಕ್ಷಕ್ಕೆ, ನಾಯಕರಿಗೆ ಮುಜುಗರ ಆಗಬಾರದು ಎಂದು ರಾಜೀನಾಮೆ ನೀಡುತ್ತಿದ್ದೇನೆ. ಮುಖ್ಯಮಂತ್ರಿಯಾಗಲಿ, ಉಪಮುಖ್ಯಮಂತ್ರಿಯಾಗಲಿ ರಾಜೀನಾಮೆಗೆ ಸೂಚಿಸಿಲ್ಲ ಎಂದು ಹೇಳಿದರು.
ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ನಡೆಯುತ್ತಿದೆ. ಹೀಗಾಗಿ ನಾನು ಸಚಿವ ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲ ಎಂದು ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದರು.
ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ 94.73 ಕೋಟಿ ರೂಪಾಯಿ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪ ಮಾಡುತ್ತಿದ್ದಾರೆ. ವಿರೋಧ ಪಕ್ಷದವರು ಕಾಂಗ್ರೆಸ್ ಪಕ್ಷದ ವಿರುದ್ಧ ಕೆಸರು ಎರಚುತ್ತಿದ್ದಾರೆ.. ರಾಜ್ಯದಲ್ಲಿ ಒಳ್ಳೆಯ ಆಡಳಿತ ನಡೆಯುತ್ತಿದೆ. ಸಿಎಂ, ಡಿಸಿಎಂ, ಖರ್ಗೆ ಅವರಿಗೆ ಮುಜುಗರ ಆಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಅಂತ ಹೇಳಿದ್ದಾರೆ.
Post a comment
Log in to write reviews