ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ತರಕಾರಿ ಬೆಲೆಯಲ್ಲಿ ಏರುಪೇರಾಗುತ್ತಿದೆ. ಈಗಿನ ಬೆಲೆ ಏರಿಕೆಯಿಂದಾಗಿ ಕಂಗೆಟ್ಟಿರುವ ಜನರಿಗೆ ತರಕಾರಿ ಖರೀದಿಸುವುದು ಕಷ್ಟವಾಗಿದೆ. ಬಹುತೇಕ ಏಲ್ಲಾ ತರಕಾರಿಗಳ ಬೆಲೆ ಕೆಜಿಗೆ 80 ರೂಪಾಯಿ ಆಗಿದೆ. ಬಿಸಿಲಿನ ಪ್ರಮಾಣ ಹೆಚ್ಚಾಗಿರುವ ಕಾರಣ ತರಕಾರಿ ಬೆಲೆ ಹೆಚ್ಚಾಗಿದ್ದು, ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಅಲ್ಲದೆ ಬೇಡಿಕೆಗೆ ತಕ್ಕಂತೆ ತರಕಾರಿ ಇಲ್ಲದೇ ಇರುವುದು ಬೆಲೆ ಏರಿಕೆಗೆ ಕಾರಣವಾಗಿದೆ. ಈ ಬಾರಿ ಸರಿಯಾಗಿ ಮಳೆಯಾಗಿಲ್ಲ. ಮಳೆ ಇಲ್ಲದ ಕಾರಣ ಬೆಳೆದ ಬೆಳೆ ಹೆಚ್ಚಿನ ಪ್ರಮಾಣದ ಫಸಲು ನೀಡಿಲ್ಲ. ಕಳೆದ ಒಂದು ವಾರದಿಂದ ಮಾತ್ರ ಧಾರಾಕಾರ ಮಳೆಯಾಗುತ್ತಿದ್ದು ಕಷ್ಟಪಟ್ಟು ಬೆಳೆಸಿದ ಬೆಳೆ ಕೂಡ ನಾಶವಾಗಿ ಹೋಗುತ್ತಿದೆ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಹೆಚ್ಚಾಗಿ ಬರುತ್ತಿಲ್ಲ. ಇರುವ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗಧಿ ಮಾಡಿ ಮಾರಾಟ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ನಗರದ ಮುಖ್ಯ ಮಾರುಕಟ್ಟೆಯಲ್ಲಿ ಅಲ್ಲದೆ ತಳ್ಳೊ ಗಾಡಿ, ಬಡಾವಣೆಗಳು, ಮನೆಗಳ ಬಳಿಯ ತರಕಾರಿ ಅಂಗಡಿಗಳಲ್ಲಿ, ಹಾಪ್ ಕಾಮ್ಸ್‌ಗಳಲ್ಲಿಯೂ ಬೆಲೆ ವಿಪರೀತ ಹೆಚ್ಚಾಗಿದೆ.
ಮತ್ತೊಂದು ಕಡೆ ಸೊಪ್ಪಿನ ಬೆಲೆ ಕೂಡ ಏರಿಕೆಯಾಗಿದೆ. ಸೊಪ್ಪಿನ ಬೆಲೆ ಕೇಳಿದ ಗ್ರಾಹಕರು ಬರಿಗೈಲಿ ವಾಪಸ್ಸಾಗುತ್ತಿದ್ದಾರೆ. ಒಂದು ಕಟ್ಟು ನಾಟಿ ಕೊತ್ತಂಬರಿ ಸೊಪ್ಪಿನ ಬೆಲೆ ಬರೋಬ್ಬರಿ 100 ರೂಪಾಯಿ ಇದೆ. ಪುದೀನ 30-40 ರೂಪಾಯಿ, ಕರಿಬೇವು 10 ರೂಪಾಯಿ, ಮೆಂತೆ ಸೊಪ್ಪು 80 ರೂಪಾಯಿ, ಪಾಲಕ್ 50 ರೂಪಾಯಿಗೆ ಒಂದು ಕಟ್ ಇದೆ. ಮುಂದಿನ ದಿನಗಳಲ್ಲಿ ತರಕಾರಿ ಬೆಲೆ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ ತರಕಾರಿ ಬೆಲೆ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಜನ ಒತ್ತಾಯಿಸುತ್ತಿದ್ದಾರೆ.
Post a comment
Log in to write reviews